ಬೆಂಗಳೂರು: ಅ.26ರಿಂದ ಮತದಾರರ ಪಟ್ಟಿ ಪರಿಷ್ಕರಣೆ
ಬೆಂಗಳೂರು, ಅ.24: ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಕ್ಟೋಬರ್ 26ರಿಂದ ನಾಲ್ಕು ದಿನಗಳ ಕಾಲ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಈ ಅವಧಿಯಲ್ಲಿ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕೆಂದು ಬೆಂಗಳೂರು ನಗರ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ.ಕಳಸದ್ ಸೂಚಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದೆ. ಇದರ ಅಂಗವಾಗಿ ಅ.26ರಿಂದ 29ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಶೇಷ ಪರಿಷ್ಕರಣಾ ಕಾರ್ಯ ಆಯೋಜಿಸಲಾಗಿದೆ. ಈ ನಾಲ್ಕು ದಿನಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಕೈಗೊಳ್ಳಬೇಕು. ಇದಕ್ಕಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ.
2019ರ ಜ.1ಕ್ಕೆ 18 ವರ್ಷ ತುಂಬುವ ಎಲ್ಲ ಯುವ ನಾಗರಿಕರು ನಮೂನೆ 6ನ್ನು ಭರ್ತಿ ಮಾಡಿ ನೀಡುವ ಮೂಲಕ ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಈ ವರೆಗೆ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳದ 18 ವರ್ಷ ಮೇಲ್ಪಟ್ಟ ನಾಗರಿಕರು ಕೂಡ ಇದೇ ಅರ್ಜಿ ಭರ್ತಿ ಮಾಡಿ ನೋಂದಣಾಧಿಕಾರಿಗಳಿಗೆ ನೀಡಬಹುದು. ಇತರೆ ಮತದಾರರು ತಮ್ಮ ಹೆಸರು ಮತದಾರ ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.





