ಭಾರತೀಯರನ್ನು ಮದುವೆಯಾದ ವಿದೇಶಿಯರು ಈಗ ಒಸಿಐ ಕಾರ್ಡ್ ಪಡೆಯಲು ಅರ್ಹರು: ಕೇಂದ್ರ
ಹೊಸದಿಲ್ಲಿ, ಅ.24: ಭಾರತೀಯ ಪ್ರಜೆಗಳು ಅಥವಾ ಸಾಗರೋತ್ತರ ಭಾರತೀಯ ಪ್ರಜೆ(ಒಸಿಐ) ಕಾರ್ಡ್‌ಗಳನ್ನು ಹೊಂದಿರುವವರನ್ನು ವಿವಾಹವಾಗಿರುವ ವಿದೇಶಿಯರು ಈಗ ಒಸಿಐ ಕಾರ್ಡ್‌ಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ. ಈ ಕಾರ್ಡ್‌ಗಳನ್ನು ಹೊಂದಿರುವವರು ಎಷ್ಟೇ ಬಾರಿ ಭಾರತಕ್ಕೆ ಆಗಮಿಸಬಹುದು ಮತ್ತು ಅವರಿಗೆ ಜೀವಿತಾವಧಿಯ ವೀಸಾ ಸೌಲಭ್ಯ ದೊರೆಯುತ್ತದೆ.
ಭಾರತೀಯ ಪೌರತ್ವವನ್ನು ತ್ಯಜಿಸುವ ಪ್ರಕ್ರಿಯೆಯನ್ನೂ ಗೃಹಸಚಿವಾಲಯವು ಸರಳಗೊಳಿಸಿದ್ದು,ಇದು ವಿದೇಶಿ ಪಾಸ್‌ಪೋರ್ಟ್‌ಗಳಿಗಾಗಿ ಅರ್ಜಿ ಸಲ್ಲಿಸಿರುವ ಭಾರತೀಯರಿಗೆ ನೆಮ್ಮದಿಯನ್ನುಂಟು ಮಾಡಿದೆ.
ಭಾರತಿಯ ಪ್ರಜೆಗಳು ಅಥವಾ ಒಸಿಐ ಕಾರ್ಡ್ ಹೊಂದಿರುವವರನ್ನು ವಿವಾಹವಾದವರು ಅಗತ್ಯ ಷರತ್ತುಗಳನ್ನು ಪೂರೈಸಿದರೆ ಒಸಿಐ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ ಎಂದು ಗೃಹ ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ. ಇಂತಹವರಿಗೆ ಈವರೆಗೆ ಈ ಸೌಲಭ್ಯ ಅನ್ವಯಿಸುತ್ತಿರಲಿಲ್ಲ.
ಇಂತಹ ವ್ಯಕ್ತಿಗಳು ಈಗ ಕೃಷಿ ಮತ್ತು ತೋಟಗಾರಿಕೆ ಆಸ್ತಿಗಳ ಖರೀದಿಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ಆರ್ಥಿಕ,ಹಣಕಾಸು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅನಿವಾಸಿ ಭಾರತೀಯರಿಗೆ ಸಮಾನವಾದ ಹಕ್ಕುಗಳನ್ನು ಪಡೆಯಲಿದ್ದಾರೆ.
2006ರಲ್ಲಿ ಹೈದರಾಬಾದ್‌ನಲ್ಲಿ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದಲ್ಲಿ ಒಸಿಐ ಯೋಜನೆಗೆ ಚಾಲನೆ ನೀಡಲಾಗಿತ್ತು.







