ಎರಡನೇ ಏಕದಿನ:ಭಾರತ-ವಿಂಡೀಸ್ ಪಂದ್ಯ ಟೈ
ಶಾಯ್ ಹೋಪ್ ದಿಟ್ಟ ಹೋರಾಟ

ವಿಶಾಖಪಟ್ಟಣ, ಅ.24: ಒತ್ತಡದ ನಡುವೆಯೂ ದಿಟ್ಟ ಹೋರಾಟ ನೀಡಿದ ಅಗ್ರ ಕ್ರಮಾಂಕದ ದಾಂಡಿಗ ಶಾಯ್ ಹೋಪ್(ಔಟಾಗದೆ 123, 134 ಎಸೆತ, 10 ಬೌಂಡರಿ, 3 ಸಿಕ್ಸರ್) ಶತಕದ ಸಹಾಯದಿಂದ ವೆಸ್ಟ್‌ಇಂಡೀಸ್ ತಂಡ ಭಾರತ ವಿರುದ್ಧದ ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಟೈ ಮಾಡಿಕೊಂಡಿತು.
ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 322 ರನ್ ಕಠಿಣ ಸವಾಲು ಪಡೆದಿರುವ ವೆಸ್ಟ್‌ಇಂಡೀಸ್ ತಂಡದ ಗೆಲುವಿಗೆ ಕೊನೆಯ ಓವರ್‌ನಲ್ಲಿ 14 ರನ್ ಅಗತ್ಯವಿತ್ತು. 13 ರನ್ ಗಳಿಸಿದ ವಿಂಡೀಸ್ ಕೇವಲ ಒಂದು ರನ್‌ನಿಂದ ಗೆಲುವು ವಂಚಿತವಾಯಿತು. ಆದಾಗ್ಯೂ ಪಂದ್ಯವನ್ನು ಟೈಗೊಳಿಸಿತು.
ವಿಂಡೀಸ್ 78 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 4ನೇ ವಿಕೆಟ್‌ಗೆ 143 ರನ್ ಜೊತೆಯಾಟ ನಡೆಸಿದ ಹೋಪ್ ಹಾಗೂ ಹೆಟ್ಮೆಯರ್(94, 64 ಎಸೆತ,4 ಬೌಂಡರಿ, 7 ಸಿಕ್ಸರ್)ವಿಂಡೀಸ್‌ಗೆ ಗೆಲುವಿನ ಆಸೆ ಮೂಡಿಸಿದರು. ಈ ಜೋಡಿಯನ್ನು ಸ್ಪಿನ್ನರ್ ಯಜುವೇಂದ್ರ ಚಹಾಲ್ ಬೇರ್ಪಡಿಸಿದರು. 94 ರನ್‌ಗೆ ಔಟಾದ ಹೆಟ್ಮೆಯರ್ ಕೇವಲ 6 ರನ್‌ನಿಂದ 4ನೇ ಶತಕ ವಂಚಿತರಾದರು.
ಹೆಟ್ಮೆಯರ್ ಔಟಾದ ಬಳಿಕ ಧೈರ್ಯಗೆಡೆದೆ ಹೋರಾಟ ಮುಂದುವರಿಸಿದ ಹೋಪ್ 113 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಾಯದಿಂದ ಎರಡನೇ ಶತಕ ಪೂರೈಸಿದರು. ನಾಯಕ ಜೇಸನ್ ಹೋಲ್ಡರ್ ಅವರೊಂದಿಗೆ 5ನೇ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಹೋಲ್ಡರ್ 12 ರನ್ ಗಳಿಸಿ ರನೌಟಾದ ಹಿನ್ನೆಲೆಯಲ್ಲಿ ವಿಂಡೀಸ್ ಹಿನ್ನಡೆ ಕಂಡಿತು.
ಭಾರತದ ಪರ ಸ್ಪಿನ್ನರ್ ಕುಲ್‌ದೀಪ್ ಯಾದವ್(3-59) 3 ವಿಕೆಟ್, ಮುಹಮ್ಮದ್ ಶಮಿ ಹಾಗೂ ಚಹಾಲ್ ತಲಾ 1 ವಿಕೆಟ್ ಪಡೆದಿದ್ದಾರೆ.
ಭಾರತ 321/6: ಕೊಹ್ಲಿ 37ನೇ ಶತಕ, ರಾಯುಡು 73
ಇದಕ್ಕೆ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಅವರ 37ನೇ ಶತಕ(ಔಟಾಗದೆ 157) ಹಾಗೂ ಅಂಬಟಿ ರಾಯುಡು 9ನೇ ಅರ್ಧಶತಕ(73)ಕೊಡುಗೆ ನೆರವಿನಿಂದ ವಿಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತ್ತು.
9ನೇ ಓವರ್‌ನಲ್ಲಿ 40 ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ಭಾರತ ಕಳಪೆ ಆರಂಭ ಪಡೆಯಿತು. ರೋಹಿತ್ ಶರ್ಮಾ 4 ರನ್‌ಗೆ ಔಟಾದರೆ, ಶಿಖರ್ ಧವನ್(29)ಮತ್ತೊಮ್ಮೆ ವಿಫಲರಾದರು.
ಆಗ ಜೊತೆಯಾದ ಕೊಹ್ಲಿ(ಔಟಾಗದೆ 157,129 ಎಸೆತ, 13 ಬೌಂಡರಿ, 4 ಸಿಕ್ಸರ್)ಹಾಗೂ ರಾಯುಡು(73,80 ಎಸೆತ, 8 ಬೌಂಡರಿ)3ನೇ ವಿಕೆಟ್‌ಗೆ 139 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಈ ಇಬ್ಬರು ನಾಲ್ಕನೇ ಬಾರಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡರು.
ರಾಯುಡು ಔಟಾದ ಬಳಿಕ ಕ್ರೀಸ್‌ಗೆ ಇಳಿದ ಮಾಜಿ ನಾಯಕ ಎಂಎಸ್ ಧೋನಿ(20) ಅವರೊಂದಿಗೆ 4 ನೇ ವಿಕೆಟ್‌ಗೆ 43 ರನ್ ಹಾಗೂ ರವೀಂದ್ರ ಜಡೇಜರೊಂದಿಗೆ 6ನೇ ವಿಕೆಟ್‌ಗೆ 59 ರನ್ ಜೊತೆಯಾಟ ನಡೆಸಿದ ಕೊಹ್ಲಿ ತಂಡದ ಮೊತ್ತವನ್ನು 321ಕ್ಕೆ ತಲುಪಿಸಿದರು.
ಯುವ ದಾಂಡಿಗ ರಿಷಭ್ ಪಂತ್(17)ಬೇಗನೇ ಔಟಾದರು. ಏಕದಿನದಲ್ಲಿ 5ನೇ ಬಾರಿ 150ಕ್ಕೂ ಅಧಿಕ ರನ್ ಗಳಿಸಿದ ಕೊಹ್ಲಿ ವಿಂಡೀಸ್ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು.
37ನೇ ಶತಕ ಪೂರೈಸಿದ ಕೊಹ್ಲಿ
ಕೊಹ್ಲಿ ತನ್ನ 205ನೇ ಇನಿಂಗ್ಸ್‌ನಲ್ಲಿ 37ನೇ ಶತಕ ಪೂರೈಸಿ ಸಚಿನ್ ತೆಂಡುಲ್ಕರ್ ದಾಖಲೆ ಮುರಿದರು. ತೆಂಡುಲ್ಕರ್ 2004ರಲ್ಲಿ ಪಾಕಿಸ್ತಾನ ವಿರುದ್ಧ ತನ್ನ 321ನೇ ಇನಿಂಗ್ಸ್‌ನಲ್ಲಿ 37ನೇ ಶತಕ ದಾಖಲಿಸಿದ್ದರು. 29ರ ಹರೆಯದ ಕೊಹ್ಲಿ ಈ ವರ್ಷ 9ನೇ ಅಂತರ್‌ರಾಷ್ಟ್ರೀಯ ಶತಕ ದಾಖಲಿಸಿದ್ದಾರೆ.
ವಿಂಡೀಸ್‌ನ ಪರ ಎಆರ್ ನರ್ಸ್(2-48) ಹಾಗೂ ಮೆಕಾಯ್(2-71) ತಲಾ ಎರಡು ವಿಕೆಟ್ ಪಡೆದರು. ಧೋನಿಯನ್ನು 20 ರನ್‌ಗೆ ಔಟ್ ಮಾಡಿದ ಮೆಕಾಯ್ ಚೊಚ್ಚಲ ವಿಕೆಟ್ ಪಡೆದಿದ್ದಾರೆ.







