ಬೆಂಗಳೂರು: ಮಣ್ಣು ಕುಸಿದು ಇಂಜಿನಿಯರ್ ಮೃತ್ಯು

ಬೆಂಗಳೂರು, ಅ.24: ನಿರ್ಮಾಣ ಹಂತ ಕಟ್ಟಡದ ತಡೆಗೋಡೆಯ ಮಣ್ಣು ಕುಸಿದು ಸೈಟ್ ಇಂಜಿನಿಯರ್ ಓರ್ವ ಮೃತಪಟ್ಟಿರುವ ಘಟನೆ ಇಲ್ಲಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬುಧವಾರ ನಗರದ ಜಕ್ಕೂರು ಸಮೀಪದ ನವ್ಯನಗರದಲ್ಲಿ ಈ ಘಟನೆ ನಡೆದಿದ್ದು, ಇಂಜಿನಿಯರ್ ಮಧು(24) ಎಂಬವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ನಬೀಬ್ ಸಾಬ್(56) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ. ಚಂದ್ರಶೇಖರ್ ಎಂಬುವರು ಮೂರು ತಿಂಗಳಿನಿಂದ ಈ ಕಟ್ಟಡದ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದರು ಎನ್ನಲಾಗಿದೆ.
ಕಟ್ಟಡ ನಿರ್ಮಾಣದ ವೀಕ್ಷಣೆಗೆ ಹೋದಾಗ ಸೈಟ್ ಇಂಜಿನಿಯರ್ ಮಧು ಹಾಗೂ ನಬೀಬ್ ಸಾಬ್ ಮೇಲೆ ಏಳು ಅಡಿ ಮಣ್ಣು ಕುಸಿದಿದೆ. ಪರಿಣಾಮ ಮಧು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಬೀಮ್ ಸಾಬ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಕಟ್ಟಡದ ನಿರ್ಮಾಣಕ್ಕೆಂದು 7 ಅಡಿ ಆಳದ ಹಳ್ಳ ತೋಡಿದ್ದಾರೆ. ಹಳ್ಳ ತೋಡಿರುವ ಜಾಗದಲ್ಲಿ ನಾಲ್ಕು ಕಡೆಯೂ ಕಾಂಕ್ರೀಟ್ ಗೋಡೆ ಇದೆ. ಇದರಿಂದಾಗಿ ಮಣ್ಣು ಕುಸಿದಿದೆ ಎಂದು ತಿಳಿದುಬಂದಿದೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.







