ಸುರತ್ಕಲ್ ಟೋಲ್‌ಗೇಟ್ ವಿರುದ್ಧದ ಧರಣಿ ನಾಲ್ಕನೇ ದಿನಕ್ಕೆ

ಮಂಗಳೂರು, ಅ. 24: ಸುರತ್ಕಲ್ನ ಅಕ್ರಮ ಟೋಲ್‌ಗೇಟ್ ಮುಚ್ಚಲು ಆಗ್ರಹಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸುರತ್ಕಲ್ ಜಂಕ್ಷನ್‌ನಲ್ಲಿ ಸೋಮವಾರದಿಂದ ರಾತ್ರಿ ಹಗಲೆನ್ನದೆ ನಡೆಯುತ್ತಿರುವ ಧರಣಿಯು ನಾಲ್ಕನೆ ದಿನವಾದ ಗುರುವಾರಕ್ಕೆ ಕಾಲಿಟ್ಟಿವೆ.
ಈ ಸಂದರ್ಭ ಮಾತನಾಡಿದ ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ ಆಕರ್ಷಕ ಹೇಳಿಕೆಗಳಲ್ಲೇ ಕಾಲತಳ್ಳುವ ಸಂಸದರಿಂದಾಗಿ ದ.ಕ. ಜಿಲ್ಲೆಯ ಹೆದ್ದಾರಿಗಳು ಸಂಚಾರಕ್ಕೆ ಅಯೋಗ್ಯಗೊಂಡಿವೆ. ಇಂತಹ ಗುಂಡಿಗಳಿಂದಲೇ ತುಂಬಿರುವ ಸುರತ್ಕಲ್ ನಂತೂರಿನ ಹೆದ್ದಾರಿಯಲ್ಲಿ ಅಕ್ರಮವಾಗಿ ಸುಂಕ ಸಂಗ್ರಹಿಸುತ್ತಿರುವುದನ್ನು ತಡೆಯಲು ಸಂಸದರು ಯಾವ ಪ್ರಯತ್ನವನ್ನು ಮಾಡುತ್ತಿಲ್ಲ. ಸುರತ್ಕಲ್ ಟೋಲ್ ಗೇಟ್ ಮುಚ್ಚುತ್ತೇವೆ ಎಂದು ಪದೇ ಪದೇ ಹೇಳುತ್ತಾ ಬಂದಿರುವುದೆ ಸಂಸದ ನಳಿನ್‌ರ ಸಾಧನೆಯಾಗಿದೆ. ಅ.30ಕ್ಕೆ ನಿಯಮದಂತೆ ಟೋಲ್ಗೇಟ್ ಮುಚ್ವದಿದ್ದಲ್ಲಿ ಜನತೆಯ ಬೆಂಬಲದೊಂದಿಗೆ ಅಕ್ರಮ ಟೋಲ್ಗೇಟ್ ಎತ್ತಂಗಡಿ ಮಾಡುವ ಕಾರ್ಯಾಚರಣೆ ನಡೆಸುತ್ತೇವೆ ಎಂದು ಹೇಳಿದರು.
ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಮಾತನಾಡಿ ಈ ಬಾರಿ ಟೋಲ್ಗೇಟ್ ನವೀಕರಣಕ್ಕೆ ಯಾವ ಕಾರಣಕ್ಕೂ ಅವಕಾಶ ನೀಡಕೂಡದು. ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟವನ್ನು ಮತ್ತಷ್ಟು ಬಲಿಷ್ಟವಾಗಿ ಮುನ್ನಸುತ್ತೇವೆ ಎಂದರು.
ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮನಪಾ ಸದಸ್ಯರಾದ ಬಶೀರ್ ಅಹ್ಮದ್ ಕಾಟಿಪಳ್ಳ, ರೇವತಿ ಪುತ್ರನ್, ದಯಾನಂದ ಶೆಟ್ಟಿ, ವಿವಿಧ ಸಂಘಟನೆಗಳ ಮುಖಂಡರಾದ ಚರಣ್ ಶೆಟ್ಟಿ, ಮಾಧುರಿ ಬೋಳಾರ, ಬಿ.ಕೆ. ಇಮ್ತಿಯಾಝ್, ನಿತಿನ್ ಕುತ್ತಾರ್, ಕಮಲಾಕ್ಷ ಬಜಾಲ್, ವೈ.ರಾಘವೇಂದ್ರ ರಾವ್, ಸುರತ್ಕಲ್ ವಲಯ ಸಂಚಾಲಕ ಶೇಖರ್ ಕೆ., ಭಾಸ್ಕರ ಶೆಟ್ಟಿಗಾರ್, ಶೇಖರ ಶೆಟ್ಟಿ ಮುಂಚೂರು, ದಯಾನಂದ ಶೆಟ್ಟಿ ಕಡಂಬೋಡಿ, ಕೃಷ್ಣಪ್ಪಕೊಂಚಾಡಿ, ಹುಸೈನ್ ಕಾಟಿಪಳ್ಳ, ಮೊಹ್ಸಿನ್ ಕಾಟಿಪಳ್ಳ, ರಾಜೇಶ್ ಶೆಟ್ಟಿ ಪಡ್ರೆ, ಪ್ರಭಾಕರ ಶೆಟ್ಟಿ, ಫಿಲೋಮಿನಾ ಹೊಸಬೆಟ್ಟು, ಹಮೀದ್ ಕಟ್ಲ, ಶ್ರೀನಾಥ್ ಕುಲಾಲ್, ಮೂಸಬ್ಬ ಪಕ್ಷಿಕೆರೆ, ರಾಜೇಶ್ ಪೂಜಾರಿ ಕುಳಾಯಿ, ಆಶಾ ಬೋಳೂರು, ಪ್ರಮೀಳಾ ಕೆ., ರಶೀದ್ ವಿಟ್ಲ, ಅಜ್ಮಲ್ ಕಾನ ಮತ್ತಿತರರು ಪಾಲ್ಗೊಂಡಿದ್ದರು.







