‘ಕನ್ನಡ ಕಟ್ಟಾಳು’, ‘ನಿಸ್ಸೀಮ ಕನ್ನಡತಿ’ ಪ್ರಶಸ್ತಿಗೆ ಆಯ್ಕೆ
ಬೆಂಗಳೂರು, ಅ. 24: 2018ನೆ ಸಾಲಿನ ಕನ್ನಡ ಕಟ್ಟಾಳು ಪ್ರಶಸ್ತಿಗೆ ಬೆಂಗಳೂರಿನ ಹನುಮಂತರಾಯ ಮತ್ತು ನಿಸ್ಸೀಮ ಕನ್ನಡತಿ ಪ್ರಶಸ್ತಿಗೆ ಮಂಗಳೂರಿನ ರಂಜಿನಿಶೆಟ್ಟಿ ಆಯ್ಕೆಯಾಗಿದ್ದಾರೆ.
ಕನ್ನಡ ಸಂಘರ್ಷ ಸಮಿತಿಯು ಮೂವತ್ತೆಂಟು ವರ್ಷಗಳಿಂದ ನಾಡು, ನುಡಿ, ನಾಡಿಗರ ಅಭ್ಯುದಯಕ್ಕಾಗಿ ನಿರಂತರ ಕ್ರಿಯಾಶೀಲತೆಯಿಂದ ದುಡಿಯುತ್ತಿದ್ದು ಎಲೆ ಮರೆಕಾಯಿಯಂತೆ ಕನ್ನಡದ ಕೆಲಸ ಮಾಡುತ್ತಿರುವವರನ್ನು ಗುರುತಿಸಿ 23 ವರ್ಷಗಳಿಂದ ಕನ್ನಡ ಕಟ್ಟಾಳು ಪ್ರಶಸ್ತಿಯನ್ನು ನೀಡುತ್ತಿದೆ.
ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಕನ್ನಡ ಕಟ್ಟಾಳು ಪ್ರಶಸ್ತಿ ಪುರಸ್ಕೃತರಿಗೆ 11 ಸಾವಿರ ರೂ.ನಗದನ್ನು ಪ್ರತಿವರ್ಷ ನೀಡುತ್ತಿದ್ದಾರೆ. 2018ನೆ ಸಾಲಿನ ಕನ್ನಡ ಕಟ್ಟಾಳು ಪ್ರಶಸ್ತಿಗೆ ಹನುಮಂತರಾಯ ಅವರನ್ನು ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಗೋಕಾಕ್ ಚಳವಳಿಯ ಕಾಲದಿಂದಲೂ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿರುವ ಇವರು ಹತ್ತಾರು ಸಂಘಟನೆಗಳೊಡನೆ ಕ್ರಿಯಾತ್ಮಕವಾಗಿ ತೊಡಗಿಕೊಂಡಿದ್ದಾರೆ. ಎಲ್ಲ ಪ್ರಮುಖ ಚಳವಳಿಗಳಲ್ಲೂ ಪಾಲ್ಗೊಂಡು ತಮ್ಮ ಕನ್ನಡ ಬದ್ಧತೆಯನ್ನು ತೋರುತ್ತಿರುವ ಹನುಮಂತರಾಯ ಅವರು ಉತ್ತಮ ಸಂಘಟಕರೂ ಹೌದು ಎಂದು ತಿಳಿಸಲಾಗಿದೆ.
ನಿಸ್ಸೀಮ ಕನ್ನಡತಿ ಪ್ರಶಸ್ತಿಗೆ ಭಾಜನರಾಗಿರುವ ರಂಜಿನಿಶೆಟ್ಟಿ, ಮೀನುಗಾರಿಕಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಲೇ ಕನ್ನಡಪರ ಚಳವಳಿಗಳಲ್ಲಿ ಸಕ್ರಿಯವಾಗಿ ದುಡಿದಿದ್ದಾರೆ. ಸಂಗೀತ, ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಸಂಘಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಜನಪರ ಕಾಳಜಿಯನ್ನು ವ್ಯಕ್ತಮಾಡುತ್ತಿದ್ದಾರೆ.
ಇವರ ಕಥೆ, ಲೇಖನಗಳು ತರಂಗ, ಮುದಿಪು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ನಿಸ್ಸೀಮ ಕನ್ನಡತಿ ಪ್ರಶಸ್ತಿಯು 5 ಸಾವಿರ ರೂ.ನಗದನ್ನು ಒಳಗೊಂಡಿದೆ. ಈ ಹಣವನ್ನು ಸಮಿತಿ ತನ್ನ ಸಂಪನ್ಮೂಲದಿಂದ ಪ್ರತಿವರ್ಷ ನೀಡುತ್ತಿದೆ ಎಂದು ಕನ್ನಡ ಸಂಘರ್ಷ ಸಮಿತಿ ಪ್ರಕಟಣೆ ತಿಳಿಸಿದೆ.







