ಅಸ್ತಾನ ಲಂಚ ಪ್ರಕರಣ: ತನಿಖಾ ತಂಡ ಸಂಪೂರ್ಣ ಬದಲಿಸಿದ ಸಿಬಿಐ

ಹೊಸದಿಲ್ಲಿ, ಅ.24: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧದ ಲಂಚ ಪ್ರಕರಣದ ತನಿಖೆ ನಡೆಸುತ್ತಿರುವ ಸಂಪೂರ್ಣ ತಂಡವನ್ನು ಸಿಬಿಐ ಬದಲಾಯಿಸಿದ. ನೂತನ ತಂಡದಲ್ಲಿ ತನಿಖಾಧಿಕಾರಿಯಿಂದ ಸಿಬ್ಬಂದಿಯವರೆಗೂ ಎಲ್ಲರೂ ಹೊಸಮುಖಗಳಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ನೂತನವಾಗಿ ನೇಮಕಗೊಂಡಿರುವ ಸಿಬಿಐ ಪ್ರಬಾರ ನಿರ್ದೇಶಕ ಎಂ.ನಾಗೇಶ್ವರ ರಾವ್ ಅವರು ಸತೀಶ್ ಡಗರ್ ಅವರನ್ನು ತನಿಖಾ ತಂಡದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ. ಸತೀಶ್ ಡಗರ್ ಈ ಹಿಂದೆ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ಪ್ರಕರಣದ ತನಿಖೆ ನಡೆಸಿದ್ದರು. ವ್ಯಾಪಂ ಹಗರಣದ ತನಿಖೆ ನಡೆಸಿದ್ದ ಡಿಐಜಿ ತರುಣ್ ಗೌಬಾ ಅವರು ಡಗರ್‌ಗೆ ಸಹಾಯಕರಾಗಿರಲಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಪ್ರಶಂಸೆ ಗಳಿಸಿದ್ದ ವಿ. ಮುರುಗೇಶನ್ ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಸ್ತಾನ ಲಂಚ ಪ್ರಕರಣದ ತನಿಖೆ ನಡೆಸುತ್ತಿದ್ದ ತಂಡದ ತನಿಖಾಧಿಕಾರಿ ಪೊಲೀಸ್ ಸಹಾಯಕ ವರಿಷ್ಟಾಧಿಕಾರಿ ಎ.ಕೆ. ಬಸ್ಸಿಯನ್ನು ಪೋರ್ಟ್ ಬ್ಲೇರ್‌ಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಎ.ಕೆ.ಬಸ್ಸಿಯನ್ನು ವರ್ಗಾವಣೆಗೊಳಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.





