ಬಿಟ್ ಕಾಯಿನ್ ಅಳವಡಿಕೆ: ಮತ್ತೊಬ್ಬ ಸೈಬರ್ ಕ್ರೈಂ ಪೊಲೀಸರ ಬಲೆಗೆ

ಬೆಂಗಳೂರು, ಅ.24: ಯುನೋಕಾಯಿನ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹೆಸರಿನಲ್ಲಿ ಬಿಟ್ ಕಾಯಿನ್ ಎಟಿಎಂ ಘಟಕ ಅಳವಡಿಸಿದ್ದ ತುಮಕೂರಿನ ಸಾತ್ವಿಕ್ ವಿ.(32) ಎಂಬುವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಡಿಜಿಟಲ್ ಕರೆನ್ಸಿ ವ್ಯವಹಾರಕ್ಕೆ ಸುಪ್ರೀಂ ಕೋರ್ಟ್‌ನ ನಿರ್ಬಂಧವಿದ್ದರೂ, ಯುನೋಕಾಯಿನ್ ಕಂಪೆನಿಯು ಹಳೆ ವಿಮಾನ ನಿಲ್ದಾಣ ರಸ್ತೆಯ ಕೆಂಪ್ ಫೋರ್ಟ್ ಮಾಲ್‌ನಲ್ಲಿ ಬಿಟ್ ಕಾಯಿನ್ ಘಟಕ ತೆರೆಯಲಾಗಿತ್ತು ಎಂದು ತಿಳಿದುಬಂದಿದೆ.
ಬುಧವಾರ ಕಂಪೆನಿ ಕಚೇರಿ ಮೇಲೆ ದಾಳಿ ನಡೆಸಿದ ಸೈಬರ್ ಕ್ರೈಂ ಪೊಲೀಸರು, ಸಾತ್ವಿಕ್ ಅವರನ್ನು ವಶಕ್ಕೆ ಪಡೆದು ಒಂದು ಲ್ಯಾಪ್‌ಟಾಪ್, ಮೊಬೈಲ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಏನಿದು ಬಿಟ್ ಕಾಯಿನ್?: ಡಾಲರ್, ರೂಪಾಯಿಗಳಂತೆಯೇ ಇದು ಸಹ ಒಂದು ನಾಣ್ಯವಾಗಿದೆ. ಆದರೆ, ಕಂಪ್ಯೂಟರ್ ಅಥವಾ ಮೊಬೈಲ್ ಪರದೆ ಮೇಲೆ ಅಂಕಿಗಳ ರೂಪದಲ್ಲಷ್ಟೇ ಇದು ಕಾಣಲು ಸಾಧ್ಯ. ಎಂಟು ವರ್ಷಗಳ ಹಿಂದೆ ಕ್ರಿಪ್ರೋ ಎಂಬ ತಂತ್ರಜ್ಞಾನ ಬಳಸಿ ಈ ಡಿಜಿಟಲ್ ಕರೆನ್ಸಿಯನ್ನು ಸೃಷ್ಟಿಸಲಾಯಿತು. ಮಧ್ಯವರ್ತಿಗಳಿಲ್ಲದೆ, ಅತಿ ಕಡಿಮೆ ವರ್ಗಾವಣೆ ಶುಲ್ಕದಲ್ಲಿ ಇಲ್ಲಿ ಹಣಕಾಸಿನ ವಹಿವಾಟು ನಡೆಯುತ್ತದೆ ಎಂದು ಹೇಳಲಾಗುತ್ತಿದೆ.





