ಪುತ್ತೂರು : ನಿವೃತ್ತ ಸರ್ಕಾರಿ ಉದ್ಯೋಗಿ ನೇಣು ಬಿಗಿದು ಆತ್ಮಹತ್ಯೆ
ಪುತ್ತೂರು, ಅ. 24: ಭೂದಾಖಲೆಗಳ ಇಲಾಖೆಯ ನಿವೃತ್ತ ಉದ್ಯೋಗಿಯೊಬ್ಬರು ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಊರಮಾಲು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಚಿಕ್ಕಮುಡ್ನೂರು ಗ್ರಾಮದ ಊರಮಾಲು ನಿವಾಸಿ, ಭೂದಾಖಲೆಗಳ ಇಲಾಖೆಯ ಟಪ್ಪಾಲು ವಿಭಾಗದ ನಿವೃತ್ತ ಸಿಬ್ಬಂದಿ ಮಾಧವ ದಾಸ್ (74) ಆತ್ಮಹತ್ಯೆ ಮಾಡಿಕೊಂಡವರು.
ಪತ್ನಿ ಮತ್ತು ಮಕ್ಕಳ ಜತೆ ಊರಮಾಲ್‍ನ ಮನೆಯಲ್ಲಿ ವಾಸ್ತವ್ಯವಿದ್ದ ಮಾಧವ ಅವರು ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಬುಧವಾರ ಬೆಳಿಗ್ಗೆ ಅವರ ಮೃತದೇಹ ಅವರು ಮಲಗಿದ ಕೋಣೆಯಲ್ಲಿ ಚೂಡಿದಾರದ ವೇಲ್ ಬಳಸಿಕೊಂಡು ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೋಣೆಯ ಬಾಗಿಲು ತೆರೆದಿಟ್ಟ ಸ್ಥಿತಿಯಲ್ಲಿ ಇತ್ತು.
ನಿವೃತ್ತಿಯ ಬಳಿಕ ಮನೆಯಲ್ಲಿಯೇ ಇದ್ದ ಅವರು ಕೆಲವು ಸಮಯದಿಂದೀಚೆಗೆ ರಕ್ತದೊತ್ತಡ ಕಾಯಿಲೆ ಹಾಗೂ ಕಾಲು ನೋವಿನಿಂದ ಬಳಲುತ್ತಿದ್ದರು. ಹಲವು ಕಡೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಕಾಲು ನೋವು ವಾಸಿಯಾಗಿರಲಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರ ಬಹುದೆಂದು ಶಂಕಿಸಲಾಗಿದೆ.
ಮೃತ ಮಾಧವ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಘಟನೆಯ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





