ಪಾದಚಾರಿ ಮಾರ್ಗಗಳ ಅವ್ಯವಸ್ಥೆ ಖಂಡಿಸಿ ಭರತ ನಾಟ್ಯ ಮಾಡಿದ ಯುವತಿಯರ ವಿಡಿಯೋ ವೈರಲ್
ಬೆಂಗಳೂರು, ಅ.24: ನಗರದಾದ್ಯಂತ ಫುಟ್‌ಪಾತ್ ಅವ್ಯವಸ್ಥೆಯ ಬಗ್ಗೆ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಮಲ್ಲೇಶ್ವರಂನ ಯುವತಿಯರು ಹರಿಬಿಟ್ಟಿದ್ದ ಅಣಕು ಭರತನಾಟ್ಯದ ವಿಡಿಯೋ ವೈರಲ್ ಆಗಿದ್ದು, ಪಾದಚಾರಿ ಮಾರ್ಗದಲ್ಲಿ ನಾಟ್ಯ ಮಾಡಿಕೊಂಡು ನಡೆದಾಡಬೇಕಾದ ಸ್ಥಿತಿ ಇದೆ ಎಂದು ಟೀಕಿಸಿದ್ದಾರೆ.
ಮಲ್ಲೇಶ್ವರಂನ 16 ನೆ ಕ್ರಾಸ್‌ನಲ್ಲಿರುವ ನಿವಾಸಿಗಳು ಸೇರಿ ಸಾಮಾಜಿಕ ಜಾಲತಾಣವೊಂದನ್ನು ಕಟ್ಟಿಕೊಂಡಿದ್ದು, ಕಳೆದ ಒಂದು ವರ್ಷದಿಂದ ಇವರು ಫುಟ್‌ಪಾತ್ ಬೇಕು ಅಭಿಯಾನ ಆರಂಭ ಮಾಡಿದ್ದಾರೆ. ಹೀಗಾಗಿ, ಫುಟ್‌ಪಾತ್‌ಗಳ ಅವ್ಯವಸ್ಥೆಯ ವಿರುದ್ಧ ಭರತ ನಾಟ್ಯದ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಹದಗೆಟ್ಟು ಹೋಗಿರುವ ಪಾದಚಾರಿಗಳ ಮಾರ್ಗವನ್ನು ಕಂಡ ತಕ್ಷಣವೇ ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುವ ಪ್ರೀತಿ ಸುಂದರರಾಜನ್ ಮತ್ತು ಸೌಮ್ಯ ಒಂದಷ್ಟು ದೂರದವರೆಗೆ ಭರತ ನಾಟ್ಯ ಮಾಡುತ್ತಾ ಸಾಗುತ್ತಾರೆ. ಇವರಿಗೆ ಶ್ರೀರಾಮ್ (ತಾಳ), ರಾಘವೇಂದ್ರ ಪೈ (ವೀಣೆ) ಮತ್ತು ಸುದರ್ಶನ್ (ಕೊಳಲು) ಸಾಥ್ ನೀಡಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ 1 ನಿಮಿಷ 13 ಸೆಕೆಂಡ್‌ಗಳ ವಿಡಿಯೋ ಚಿತ್ರೀಕರಿಸಿದ್ದು, ಅ. 16ರಂದು ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲಕ್ಷಾಂತರ ಜನರು ಅದನ್ನು ವೀಕ್ಷಿಸಿ ಅಭಿನಂದಿಸಿ, ಸರಕಾರದ ನಿರ್ಲಕ್ಷವನ್ನು ಲೇವಡಿ ಮಾಡಿದ್ದಾರೆ.
ನಾವು ಕಳೆದ ಒಂದು ವರ್ಷದಿಂದ ಫುಟ್‌ಪಾತ್ ಬೇಕು ಎಂಬ ಅಭಿಯಾನ ಆರಂಭಿಸಿದ್ದೇವೆ. ಇದರ ಅಂಗವಾಗಿ ಭರತ ನಾಟ್ಯದ ದೃಶ್ಯಾವಳಿಯನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗುತ್ತದೆ. ನ. 1ರಂದು ಫುಟ್‌ಪಾತ್‌ಗಳ ಮೇಲೆ ಹಿರಿಯ ನಾಗರಿಕರ ನಡಿಗೆ ಎಂಬ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದು ಮಲ್ಲೇಶ್ವರಂ ಸೋಷಿಯಲ್ ಮೀಡಿಯಾ ತಂಡದ ಸದಸ್ಯ ಧನುಷ್ ಹೇಳಿದ್ದಾರೆ.
ಅಂಗಡಿ-ಮುಂಗಟ್ಟುಗಳು, ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿದ್ದಾರೆ. ಅಲ್ಲದೆ, ನಗರದಲ್ಲಿ ಕಟ್ಟಡ ನಿರ್ಮಾಣ ಮಾಡುವ ಸಾಮಾಗ್ರಿಗಳನ್ನು ಪಾದಚಾರಿ ಮಾರ್ಗದಲ್ಲಿಯೇ ಸುರಿದಿರುತ್ತಾರೆ. ಜತೆಗೆ ಬಹುತೇಕ ಪ್ರದೇಶಗಳಲ್ಲಿ ಫುಟ್‌ಪಾತ್‌ನಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಿರುತ್ತಾರೆ. ಇದರಿಂದಾಗಿ ನಡೆದಾಡುವವರಿಗೆ ತೀವ್ರ ಕಿರಿಕಿರಿಯಾಗುತ್ತಿದೆ.
ಜನರು ನಡೆದುಕೊಂಡು ಹೋಗಲು ಸರಿಯಾದ ಮಾರ್ಗವಿಲ್ಲದೇ ಇರುವುದರಿಂದ ರಸ್ತೆಗೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವಾಹನಗಳು ಜನರ ಮೇಲೆ ಹರಿಯುವ ಸಂಭವ ಹೆಚ್ಚಾಗುತ್ತಿದೆ. ಹಾಗೂ ಜನ ರಸ್ತೆಯಲ್ಲಿ ಹೋಗುವುದರಿಂದ ಟ್ರಾಫಿಕ್ ಕಿರಿಕಿರಿಯೂ ನಿರ್ಮಾಣವಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಭರತ ನಾಟ್ಯದ ವಿಡಿಯೋಗಳನ್ನು ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್ ಮೂಲಕ ಸರಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.







