ಏಕಾಏಕಿ ಸ್ಲಂ ಮೇಲೆ ದಾಳಿ: ಖಂಡನೆ
ಬೆಂಗಳೂರು, ಅ.24: ಕಳೆದ ಹತ್ತು ವರ್ಷಗಳಿಂದ ಹೊಸಕೆರೆಹಳ್ಳಿ ಬಳಿಯ ಸರಕಾರಿ ಭೂಮಿಯಲ್ಲಿ ವಾಸಿಸುತ್ತಿದ್ದ ಸ್ಲಂ ನಿವಾಸಿಗಳನ್ನು ಏಕಾಏಕಿ ಬಿಡಿಎ ಅಧಿಕಾರಿಗಳು ತೆರವು ಮಾಡಿಸಿದ್ದಾರೆ ಎಂದು ಕರ್ನಾಟಕ ಜನಾಂದೋಲನಾ ಸಂಘಟನೆ ಆರೋಪಿಸಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಸರಕಾರಿ ಭೂಮಿಯಲ್ಲಿ 30 ಕ್ಕೂ ಅಧಿಕ ದಲಿತ ಕುಟುಂಬಗಳು ಕಳೆದ 10 ವರ್ಷಗಳಿಂದ ಇಲ್ಲಿನ ಸರ್ವೆ ನಂ.90 ರಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇಲ್ಲಿ ಬಹುತೇಕ ಹಂದಿಜೋಗಿ ಕುಟುಂಬದವರು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವಿಸುತ್ತಿದ್ದಾರೆ.
ಆದರೆ, ಬಿಜೆಪಿ ಶಾಸಕ ರವಿಸುಬ್ರಮಣ್ಯ ಹಲವಾರು ದಿನಗಳಿಂದ ಈ ಭೂಮಿಯ ಮೇಲೆ ಕಣ್ಣಿಟ್ಟಿದ್ದು, ಕಬಳಿಸಿಕೊಳ್ಳಲು ಯತ್ನಿಸುತ್ತಿದ್ದರು. ಅದರ ಮುಂದುವರಿದ ಭಾಗವಾಗಿ ಅ.23 ರಂದು ಬೆಳಗ್ಗೆ ಬಿಡಿಎ ಅಧಿಕಾರಿಗಳ ನೆರವಿನೊಂದಿಗೆ ಇಲ್ಲಿನ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸಿ, ಗುಡಿಸಲುಗಳನ್ನು ತೆರವು ಮಾಡಿ, ಬೀದಿಪಾಲು ಮಾಡಿದ್ದಾರೆ ಎಂದು ಸಂಘಟನೆ ಅಧ್ಯಕ್ಷ ಕೆ.ಮರಿಯಪ್ಪ ದೂರಿದ್ದಾರೆ.
ಇಲ್ಲಿನ ಗುಡಿಸಲುನಲ್ಲಿ ವಾಸ ಮಾಡುತ್ತಿದ್ದ ಹಲವು ಮಹಿಳೆಯರು ಇತ್ತೀಚಿಗೆಯಷ್ಟೇ ಹೆರಿಗೆಯಾಗಿದ್ದು, ಸಣ್ಣ ಮಕ್ಕಳಿದ್ದಾರೆ ಎಂಬುದನ್ನು ಲೆಕ್ಕಿಸದೇ ತೆರವು ಮಾಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆಯಲಾಗಿದೆ. ಕೂಡಲೇ ರಾಜ್ಯ ಸರಕಾರ ಕೊಳಚೆ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು, ಬಿಡಿಎ ಆಯುಕ್ತರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಜತೆಗೆ ಸ್ಲಂ ನಿವಾಸಿಗಳಿಗೆ ಮಾನವೀಯತೆ ದೃಷ್ಟಿಯಿಂದ ವಾಸಿಸಲು ವಸತಿಗಳನ್ನು ನಿರ್ಮಿಸಿಕೊಡಬೇಕು ಎಂದು ಮರಿಯಪ್ಪ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.







