ಉಡುಪಿ: 28ರಿಂದ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ
ಉಡುಪಿ, ಅ.24: ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಆಯೋಜಿಸುತ್ತಿರುವ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ-2018 ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅ.28ರಿಂದ ನ.3ರವರೆಗೆ ನಡೆಯಲಿದೆ.
ಸಪ್ತಾಹವನ್ನು ಅ.28ರ ಸಂಜೆ 7 ಗಂಟೆಗೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದು, ಇದೇ ಸಂದರ್ಭದಲ್ಲಿ ಶಿವಕುಮಾರ್ ಬಿ.ಎ ಅಳಗೋಡು ಬರೆದ ‘ಚಿಟ್ಟಾಣಿಯವರ ಕೊನೆಯ ದಿನಗಳು’ ಪುಸ್ತಕವನ್ನು ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಕಟಪಾಡಿ ಶಂಕರ ಪೂಜಾರಿ ಹಾಗೂ ಗೋಪಾಲ ಸಿ ಬಂಗೇರ ಉಪಸ್ಥಿತರಿರುವರು.
ಚಿಟ್ಟಾಣಿ ಸಂಸ್ಮರಣ ಸಪ್ತಾಹವು ಪ್ರತಿದಿನ ಸಂಜೆ 7 ಕ್ಕೆ ಪ್ರಾರಂಭಗೊಳ್ಳ ಲಿದ್ದು, ಅನುಕ್ರಮವಾಗಿ ಲವಕುಶ, ಬ್ರಹ್ಮಕಪಾಲ, ಸಗರ ಸಾರ್ವಬೌಮ, ಕವಿರತ್ನ ಕಾಳಿದಾಸ, ಕರ್ಣಪರ್ವ, ಕನಕಾಂಗಿ ಕಲ್ಯಾಣ, ರಾಜಾ ಬೃಹದ್ರಥ ಪ್ರಸಂಗಗಳು ಪ್ರಸ್ತುತಗೊಳ್ಳಲಿವೆ.
ನ.3ರಂದು ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ಪಲಿಮಾರು ಹಾಗೂ ಅದಮಾರು ಕಿರಿಯ ಯತಿಗಳ ಉಪಸ್ಥಿತಿಯಲ್ಲಿ ಸಂಪನ್ನಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಕೆ.ಗಣೇಶ್ ರಾವ್, ರವಿರಾಜ ಕುಮಾರ್, ಡಾ. ಟಿ. ಎಸ್.ರಾವ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಾಧವ ಹೆಗಡೆ ಅವರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಮಧುಕರ ಮಲ್ಯ ಬೆಳ್ತಂಗಡಿ ಇವರಿಗೆ ಟಿ.ವಿ.ರಾವ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಚಿಟ್ಟಾಣಿ ಅಭಿಮಾನಿ ಬಳಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







