ರಫೇಲ್ ಹಗರಣ ಆರೋಪ: ದೇಶದ ಜನತೆಯ ಸಂಶಯಗಳಿಗೆ ಮೋದಿ ಉತ್ತರಿಸಲು ಸಿಪಿಐ ಆಗ್ರಹ

ಬೆಂಗಳೂರು, ಅ. 24: ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ಸಂಬಂಧ ದೇಶದ ಜನತೆಯಲ್ಲಿನ ಸಂಶಯಗಳಿಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಉತ್ತರ ನೀಡಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ) ಬೆಂಗಳೂರು ಜಿಲ್ಲಾ ಮಂಡಳಿ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದರು.
ಬುಧವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಸಿಪಿಐ ರಾಜ್ಯ ಮಂಡಳಿ ಸದಸ್ಯ ಎಚ್.ವಿ.ರೈ, ‘ನಾನು ತಿನ್ನುವುದೂ ಇಲ್ಲ, ತಿನ್ನಲು ಬಿಡುವುದೂ ಇಲ್ಲ’ ಎಂದು ಘೋಷಿಸಿದ್ದ ಪ್ರಧಾನಿ ಮೋದಿ, ದೇಶದ ಭದ್ರತೆಯನ್ನು ಅಡವಿಟ್ಟು ಆಪ್ತಮಿತ್ರ ಅಂಬಾನಿಗೆ ದೇಶವನ್ನು ಸುಲಿಗೆ ಮಾಡಲು ಅವಕಾಶ ನೀಡಿದ್ದೇಕೆ? ಎಂದು ಪ್ರಶ್ನಿಸಿದರು.
ರಫೇಲ್ ಯುದ್ದ ವಿಮಾನ ಖರೀದಿ ಹಗರಣದ ಬಗ್ಗೆ ದೇಶದ ಜನತೆಗೆ ಅನುಮಾನ ಇದೆ. ಇದರಲ್ಲಿ ನಿಮ್ಮ ಪಾಲೇನು ಎಂಬ ಗುಮಾನಿಯೂ ಜನತೆಯನ್ನು ಕಾಡುತ್ತಿದೆ. ಆದುದರಿಂದ ಎಲ್ಲ ಪ್ರಶ್ನೆಗಳಿಗೆ ಮೋದಿ, ಅವರ ಕೇಂದ್ರ ಸರಕಾರ ಪ್ರತಿನಿಧಿಸುವವರು ಉತ್ತರಿಸಬೇಕೆಂದು ಅವರು ಆಗ್ರಹಿಸಿದರು. 2015ರ ಮಾರ್ಚ್ 28ರಂದು ರಿಲೈಯನ್ಸ್ ಡಿಫೆನ್ಸ್ ಲಿಮಿಟೆಡ್ ಒಂದು ಕಂಪೆನಿಯಾಗಿ ನೋಂದಣಿಯಾಗಿ 2015ರ ಎಪ್ರಿಲ್ 10ಕ್ಕೆ ರಫೇಲ್ ವ್ಯವಹಾರದಲ್ಲಿ ಆಫ್‌ಸೆಟ್ ಪಾಲುದಾರನೆಂದು ಘೋಷಿಸಲಾಗುತ್ತದೆ. ಈ ಕಂಪೆನಿಯ ಅನುಭವ, ಪರಿಣಿತಿ ಮತ್ತು ಸಾಮರ್ಥ್ಯಗಳೇನು ಎಂದು ಅವರು ಕೇಳಿದರು.
ಸರಕಾರಿ ಸ್ವಾಮ್ಯದ ಎಚ್‌ಎಎಲ್‌ಗಿಂತ ಅನಿಲ್ ಅಂಬಾನಿಯ ಸಂಸ್ಥೆ ರಾಷ್ಟ್ರೀಯ ಭದ್ರತೆಯ ಹಿತ ಕಾಯುತ್ತದೆಂಬುದು ಪ್ರಧಾನಿಯವರ ನಂಬಿಕೆಯೇ? ಎಂದು ಪ್ರಶ್ನಿಸಿದ ಅವರು, 2016ರ ನವೆಂಬರ್ 18ರಂದು 36 ರಫೇಲ್ ಯುದ್ಧ ವಿಮಾನಗಳ ದರವನ್ನು ಪ್ರತಿ ವಿಮಾನಕ್ಕೆ 670 ಕೋಟಿ ರೂ. ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವಾಲಯ ಲೋಕಸಭೆಯಲ್ಲಿ ಬಹಿರಂಗಗೊಳಿಸಿರುತ್ತದೆ.
ಕೂಡಲೇ ಡಸಾಲ್ಟ್ ಮತ್ತು ರಿಲೈಯನ್ಸ್ ಕಂಪೆನಿಗಳು ಹೇಳಿಕೆ ನೀಡಿ ಪ್ರತಿ ವಿಮಾನದ ದರವನ್ನು 1,660 ಕೋಟಿ ರೂ.ಗಳೆಂದು ತಿಳಿಸುತ್ತದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಏಕಾಏಕಿ ದರ ಏರಿಕೆಯಾಗಲು ಕಾರಣವೇನು? ಎಂದ ಅವರು, ಪ್ರಧಾನಿ ಮುಂದಾಳತ್ವದಲ್ಲೇ ಈ ರಫೇಲ್ ಒಪ್ಪಂದ ಏರ್ಪಟ್ಟಿದ್ದು, ಈ ಸಂಬಂಧದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಲು ಏಕೆ ಹೆದರಬೇಕೆಂದು ಎಚ್.ವಿ.ರೈ ಪ್ರಶ್ನಿಸಿದರು. ಮುಖಂಡರಾದ ವಿಜಯ ಭಾಸ್ಕರ್, ಎನ್.ಶಿವಣ್ಣ, ಜಿ.ಬಾಬು, ಹರಿಗೋವಿಂದ್ ಹಾಜರಿದ್ದರು.







