ಭಾರತದ ಮೊದಲ ಎಂಜಿನ್ ರಹಿತ ರೈಲು ಸಂಚಾರ ಅ. 29ರಿಂದ ಆರಂಭ

ಹೊಸದಿಲ್ಲಿ, ಅ. 24: ಮೂವತ್ತು ವರ್ಷ ಹಳೆಯ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಬದಲಿಗೆ ದೇಶದ ಮೊದಲ ಎಂಜಿನ್ ರಹಿತ ರೈಲು ‘ಟ್ರೈನ್-18’ ಅಕ್ಟೋಬರ್ 29ರಂದು ಪ್ರಾಯೋಗಿಕ ಸಂಚಾರ ನಡೆಸಲಿದೆ.
ಪ್ರತ್ಯೇಕ ಎಂಜಿನ್ ಇಲ್ಲದೆ, ಸ್ವಯಂ ತಳ್ಳುವಿಕೆಯ ಮಾಡ್ಯುಲ್‌ನಲ್ಲಿ ಚಲಿಸುವ ಈ ರೈಲು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಎಂಜಿನ್ ಹೊಂದಿರದ ಮೂಲ ಮಾದರಿಯ 19 ಬೋಗಿಗಳನ್ನು ಹೊಂದಿರುವ ಈ ರೈಲು ಶತಾಬ್ದಿಗೆ ಹೋಲಿಸಿದರೆ, ಪ್ರಯಾಣದ ಸಮಯ ಶೇ. 15 ಕಡಿತಗೊಳ್ಳಲಿದೆ.
ಚೆನ್ನೈಯ ಸಮಗ್ರ ಕೋಚ್ ಫ್ಯಾಕ್ಟರಿ 18 ತಿಂಗಳಲ್ಲಿ ಈ ರೈಲನ್ನು ನಿರ್ಮಿಸಿದೆ. ಮೂಲ ಮಾದರಿ ಹಾಗೂ ಅನಂತರದ ನಿರ್ಮಾಣಕ್ಕೆ ಸುಮಾರು 100 ಕೋ. ರೂ. ವೆಚ್ಚವಾಗಿದೆ ಎಂದು ಐಸಿಎಫ್ ಜನರಲ್ ಮ್ಯಾನೇಜರ್ ಸುಧಾಂಶು ಮಣಿ ತಿಳಿಸಿದ್ದಾರೆ.
‘‘ಈ ರೈಲನ್ನು ಅಕ್ಟೋಬರ್ 29ರಂದು ಲೋಕಾರ್ಪಣೆಗೊಳಿಸಲಾಗುವುದು. ಫ್ಯಾಕ್ಟರಿಯಿಂದ ಹೊರಗೆ ಮೂರರಿಂದ ನಾಲ್ಕು ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಲಾಗುವುದು. ಅನಂತರ ಮುಂದಿನ ಪ್ರಾಯೋಗಿಕ ಸಂಚಾರಕ್ಕಾಗಿ ಸಂಶೋಧನ ವಿನ್ಯಾಸ ಹಾಗೂ ಗುಣಮಟ್ಟದ ಸಂಘಟನೆ (ಆರ್‌ಡಿಎಸ್‌ಒ) ಗೆ ಹಸ್ತಾಂತರಿಸಲಾಗುವುದು’’ ಎಂದು ಅವರು ತಿಳಿಸಿದ್ದಾರೆ.
ಸ್ವಯಂಚಾಲಿತ ಈ ರೈಲಿನಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ರೈಲಿನ ಮಧ್ಯಭಾಗದಲ್ಲಿ 52 ಸೀಟುಗಳನ್ನು ಒಳಗೊಂಡ ಎರಡು ಎಕ್ಸಿಕ್ಟೂಟಿವ್ ಬೋಗಿಗಳು ಇರಲಿವೆ. ಪ್ರಾಯೋಗಿಕ ಪ್ರತಿ ಬೋಗಿಯಲ್ಲಿ ಸೀಟುಗಳ ಇರಲಿವೆ.
ಶತಾಬ್ದಿ ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಆದರೆ, ಈ ರೈಲು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಒಮ್ಮೆ ‘ಟ್ರೈನ್-18’ಕ್ಕೆ ಹಳಿ ಹೊಂದಿಕೆಯಾದರೆ, ಪ್ರಯಾಣದ ಸಮಯ ಶೇ. 15 ಕಡಿಮೆ ಆಗಲಿದೆ.
‘ಟ್ರೈನ್-18’ ಲೈಟಿಂಗ್ಸ್, ಅಟೋಮ್ಯಾಟಿಕ್ ಡೋರ್‌ಗಳು, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ಅಲ್ಲದೆ ಫುಟ್‌ಸ್ಟೆಪ್ಸ್‌ಗಳನ್ನು ಈ ರೈಲುಗಳು ಹೊಂದಿರಲಿವೆ. ರೈಲು ನಿಲ್ದಾಣದಲ್ಲಿ ನಿಂತ ಕೂಡಲೇ ಫುಟ್‌ಸ್ಟೆಪ್ಸ್ ಹೊರಗೆ ಚಾಚಿಕೊಳ್ಳುತ್ತದೆ. ರೈಲು ಫ್ಲೋರ್ ಹಾಗೂ ಫ್ಲಾಟ್‌ಫಾರ್ಮ್‌ಗೆ ಅನುಗುಣವಾಗಿ ಇದು ಚಾಚಿಕೊಳ್ಳುವುದರಿಂದ ಪ್ರಯಾಣಿಕರು ರೈಲು ಏರಿ ಇಳಿಯಲು ಸುಲಭ.
ಶತಾಬ್ದಿ ರೈಲನ್ನು 1988ರಲ್ಲಿ ಪರಿಚಯಿಸಲಾಗಿತ್ತು. ಪ್ರಸ್ತುತ 80 ಮಾರ್ಗಗಳಲ್ಲಿ ಸಂಚರಿಸುವ ಶತಾಬ್ದಿ ರೈಲು ಮೆಟ್ರೊದೊಂದಿಗೆ ಇತರ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ.







