ಮಂಗಳೂರು: ಪೊಲೀಸರಿಂದ ಮಹಿಳೆ ಮೇಲೆ ದೌರ್ಜನ್ಯ; ಆರೋಪ

ಮಂಗಳೂರು, ಅ.24: ಪತಿಯ ವಿರುದ್ಧ ದಾಖಲಾಗಿರುವ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಪೊಲೀಸರು ಠಾಣೆಗೆ ಕರೆದೊಯ್ದು, ವಾಚ್ಯವಾಗಿ ನಿಂದಿಸಿ, ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದೆ.
ಕೈಕಂಬ ಸಮೀಪದ ಗಂಜಿಮಠ ನಿವಾಸಿ ಸಲೀಕ (40) ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದ್ದು, ಮಹಿಳೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಬಜ್ಪೆ ಪೊಲೀಸರು ಅ. 23ರಂದು ಸಂಜೆ 4:15ಕ್ಕೆ ತನ್ನ ಮನೆಗೆ ಪ್ರವೇಶಿಸಿ, ನಿನ್ನ ಪತಿ ಎಲ್ಲಿ, ಆತನ ನಂಬರ್ ಕೊಡಿ ಎಂದು ಮೊಬೈಲ್‌ನ್ನು ಕಸಿದು ಕೊಂಡರು. ಆಗ, ನನ್ನ ಬಳಿ ಅವರ ನಂಬರ್ ಇಲ್ಲ, ಸಂಪರ್ಕವೂ ಇಲ್ಲ ಎಂದು ಉತ್ತರಿಸಿದೆ. ಹಾಗಾದರೆ ಪೊಲೀಸ್ ಠಾಣೆಗೆ ನಡೆಯಿರಿ ಎಂದು ಠಾಣೆಗೆ ಕರೆದೊಯ್ದರು. ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಊಟದ ತಟ್ಟೆಯಿಂದ ಹಲ್ಲೆ ನಡೆಸಿ, ದೌರ್ಜನ್ಯ ನಡೆಸಿದ್ದಾರೆ’ ಎಂದು ಹಲ್ಲೆಗೊಳಗಾದ ಸಂತ್ರಸ್ತೆ ಸಲೀಕ ಆರೋಪಿಸಿದ್ದಾರೆ.
ತಾನು ಬಡತನದಲ್ಲಿಯೇ ಜೀವನ ನಡೆಸುತ್ತಿದ್ದು, ತನ್ನ ಗಂಡನ ವಿರುದ್ಧದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕಿತ್ತೇ ಹೊರತು ಮನೆಯವರಿಗೆ ಕಿರುಕುಳ ನೀಡುವುದಲ್ಲ. ಇದರಿಂದ ತನಗೆ ಮಾನಸಿಕವಾಗಿ ಆಘಾತವಾಗಿದೆ. ಕುಡಿಯಲು ನೀರು ಕೇಳಿದರೂ ಕೊಟ್ಟಿಲ್ಲ. ನಿನ್ನ ಗಂಡನ ಜೊತೆ ನಿನ್ನ ವಿರುದ್ಧವೂ ಕೇಸು ಹಾಕುತ್ತೇವೆ ಎಂದು ಪೊಲೀಸರು ಬೆದರಿಕೆ ಹಾಕಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.
ಗಂಜಿಮಠ ಮೂಲದ ಮಹಿಳೆಯ ಮೇಲೆ ಬಜ್ಪೆ ಪೊಲೀಸ್ ಇನ್‌ಸ್ಪೆಕ್ಟರ್ ಹಲ್ಲೆ ನಡೆಸಿರುವುದು ಖಂಡನೀಯವೆಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ದೌರ್ಜನ್ಯ ಸುಳ್ಳು ಸುದ್ದಿ: ಪೊಲೀಸ್ ಇನ್‌ಸ್ಪೆಕ್ಟರ್
ಮಹಿಳೆಯ ಪತಿ ಅಬ್ದುಲ್ ಲತೀಫ್ ವಿರುದ್ಧ 1.2 ವರ್ಷದ ಹಿಂದೆ ಪೊಕ್ಸೊ ಪ್ರಕರಣ ದಾಖಲಾಗಿತ್ತು. ವಿಚಾರಣೆಗಾಗಿ ಮಹಿಳೆಯನ್ನು ಠಾಣೆಗೆ ಕರೆಸಿದ್ದೇವು. ದೌರ್ಜನ್ಯ ನಡೆಸಲಾಗಿದೆ ಎನ್ನುವುದು ಸುಳ್ಳುಸುದ್ದಿ. ಆರೋಪಿಯ ಜೊತೆ ಮಹಿಳೆ ನಿರಂತರ ಸಂಪರ್ಕದಲ್ಲಿದ್ದರೂ ಪೊಲೀಸರಿಗೆ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಬಜ್ಪೆ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ತಿಳಿಸಿದ್ದಾರೆ.
ಆರೋಪಿ ಪತಿಯನ್ನು ಕರೆದುಕೊಂಡು ಬರುತ್ತೇವೆ ಎಂದು ಮಂಗಳವಾರ ಸಂಜೆ ಮಹಿಳೆ ಹೇಳಿಕೆ ನೀಡಿದ್ದರು. ಈ ವೇಳೆ ಮಹಿಳೆಯ ಸಹೋದರ ನಝೀರ್ ಅಹ್ಮದ್ ಜೊತೆಯಲ್ಲಿದ್ದರು. ಬಳಿಕ ತನಗೆ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದಾರೆ. ಪೊಲೀಸರು ತಮ್ಮ ಮನೆಗೆ ಬಾರದಿರಲೆಂದು ಈ ರೀತಿ ಮಾಡಿದ್ದಾರೆ. ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಕ್ರಮ ಕೈಗೊಂಡು ಸಂತ್ರಸ್ತೆಗೆ ನ್ಯಾಯ ಕೊಡಿಸುವುದಾಗಿ ಪೊಲೀಸ್ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.







