ಶಿವಾಜಿ ಸ್ಮಾರಕ ಸ್ಥಳಕ್ಕೆ ಪೂಜೆಗೆ ಅಧಿಕಾರಿಗಳನ್ನು ಸಾಗಿಸುತ್ತಿದ್ದ ಬೋಟ್ ಪಲ್ಟಿ; ಓರ್ವ ಮೃತ್ಯು

ಮುಂಬೈ, ಅ.24: ಮುಂಬೈ ಕರಾವಳಿಯಾಚೆ ಅರಬ್ಬಿ ಸಮುದ್ರದಲ್ಲಿ ಉದ್ದೇಶಿತ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕ ಸ್ಥಳದಲ್ಲಿ ಪೂಜೆಗಾಗಿ ಬುಧವಾರ ಮುಖ್ಯ ಕಾರ್ಯದರ್ಶಿ ಸೇರಿದಂತೆ ಕನಿಷ್ಠ 40 ಸರಕಾರಿ ಅಧಿಕಾರಿಗಳು,ಸುದ್ದಿಗಾರರು ಮತ್ತು ಟಿವಿ ವಾಹಿನಿಗಳ ಸಿಬ್ಬಂದಿಗಳನ್ನು ಸಾಗಿಸುತ್ತಿದ್ದ ಸ್ಪೀಡ್ ಬೋಟ್ ಮಾರ್ಗಮಧ್ಯೆ ಮಗುಚಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ಭಾರತೀಯ ತಟ ರಕ್ಷಣಾ ಪಡೆ, ಸಾಗರ ಪೊಲೀಸ್ ಪಡೆ ಮತ್ತು ಇತರ ಏಜೆನ್ಸಿಗಳು ಎರಡು ಹೆಲಿಕಾಪ್ಟರ್‌ಗಳೊಂದಿಗೆ ಭಾರೀ ಕಾರ್ಯಾಚರಣೆಯನ್ನು ನಡೆಸಿ ಇತರರನ್ನು ರಕ್ಷಿಸುವಲ್ಲಿ ಸಫಲಗೊಂಡಿವೆ ಎಂದು ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.
ನರಿಮನ್ ಪಾಯಿಂಟ್‌ನಿಂದ ಸುಮಾರು 2.6 ಕಿ.ಮೀ.ದೂರದಲ್ಲಿ ಸಂಜೆ 4:15ರ ಸುಮಾರಿಗೆ ಈ ಅವಘಡ ನಡೆದಿದೆ.
ಸ್ಮಾರಕ ನಿರ್ಮಾಣದ ಗುತ್ತಿಗೆಯನ್ನು ಪಡೆದುಕೊಂಡಿರುವ ಲಾರ್ಸೆನ್ ಆ್ಯಂಡ್ ಟುಬ್ರೋ ಬುಧವಾರ ಶಿವಾಜಿ ಪ್ರತಿಮೆಯ ಕಾರ್ಯವನ್ನು ಆರಂಭಿಸಲಿತ್ತು. ಅವಘಡದ ಬಳಿಕ ಅದಕ್ಕಾಗಿ ಆಯೋಜಿಲಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
Next Story





