ಸಿದ್ದರಾಮಯ್ಯರ ರಾಜಕೀಯ ನಿವೃತ್ತಿಗೆ ಬಿಡುವುದಿಲ್ಲ: ಸಚಿವ ಝಮೀರ್ ಅಹ್ಮದ್

ಮಂಡ್ಯ, ಅ.24: ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿ ಪಡೆದುಕೊಳ್ಳಲು ನಾವು ಬಿಡುವುದಿಲ್ಲ. ಒಂದು ವೇಳೆ ಅವರು ನಿವೃತ್ತಿಯಾದರೂ ನಾವು ಮನೆಯಿಂದ ಎತ್ತಿಕೊಂಡು ಬರುತ್ತೇವೆ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾವು ಇಂದಿನಿಂದ ಚುನಾವಣಾ ಪ್ರಚಾರಕ್ಕೆ ಇಳಿಯುತ್ತಿದ್ದೇವೆ. ಪ್ರಚಾರಕ್ಕೆ ರಮ್ಯಾ, ಅಂಬರೀಶ್ ಸೇರಿದಂತೆ ಕಾಂಗ್ರೆಸ್‍ನ ಮಾಜಿ ಶಾಸಕರು ಬರುತ್ತಾರೆ ಎಂದರು. ನಾನು ಚುನಾವಣೆ ಸಮಯದಲ್ಲಿ ಕುಮಾರಸ್ವಾಮಿ ಅವರ ಕುರಿತು ಕೆಟ್ಟದಾಗಿ ಮಾತನಾಡಿದ್ದು ನಿಜ. ಆದರೆ, ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಸೇರಿ ಸರಕಾರ ರಚಿಸಿ ತಾವು ಜಾತ್ಯತೀತರು ಅನ್ನೋದು ಸಾಬೀತುಪಡಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ರಮೇಶ್ ಜಾರಕಿಹೊಳಿ ಅವರು ಡಿ.ಕೆ.ಶಿವಕುಮಾರ್ ಅವರ ಕುರಿತು ಹೇಳಿಕೆ ನೀಡಿಲ್ಲ. ಶೋ ಅಪ್ ಮಾಡ್ಬೇಡಿ ಅಂತ ಅವರೇ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಕುರಿತು ಹೇಳಿದ್ದಾರೆ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದು ಅವರು ಪ್ರಶ್ನೆಗೆ ಪ್ರತಿಕ್ರಿಯಿಸಿದರು. ರಾಜಕೀಯ ಸ್ನೇಹಿತರಾದ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಬಾಲಕೃಷ್ಣ ಸೇರಿದಂತೆ 7 ಮಂದಿಗೆ ರಾಜಕೀಯವಾಗಿ ಯಾವುದೇ ರೀತಿಯ ತೊಂದರೆಯಾದರೂ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದೂ ಅವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲೆಡೆ ಸರಕಾರ ಬೀಳಲಿದೆ ಎಂದು ಹೇಳುತ್ತಾ ಹಗಲುಗನಸು ಕಾಣುತ್ತಿದ್ದಾರೆ. ಸಮ್ಮಿಶ್ರ ಸರಕಾರ ರಚನೆಯಾದ ದಿನದಿಂದಲೂ ಅವರ ಕನಸು ಕನಸಾಗಿಯೇ ಉಳಿದಿದೆ ಎಂದು ಅವರು ವ್ಯಂಗ್ಯವಾಡಿದರು. ಇದಕ್ಕೂ ಮುನ್ನ ಅಪಘಾತದಲ್ಲಿ ಮೃತಪಟ್ಟ ಕಾಂಗ್ರೆಸ್ ಮುಖಂಡ ರಫೀವುಲ್ಲಾ ಅವರ ಮನೆಗೆ ಝಮೀರ್ ಅಹ್ಮದ್ ಖಾನ್ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುನಾವರ್ ಖಾನ್, ಗಣಿಗ ಪಿ.ರವಿಕುಮಾರ್, ಕುಮಾರ್, ಇತರ ಮುಖಂಡರು ಹಾಜರಿದ್ದರು.







