ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿದ ಬಿಜೆಪಿಯವರೇ ಅಸ್ಥಿರಗೊಂಡಿದ್ದಾರೆ: ಸಿದ್ದರಾಮಯ್ಯ

ಮೈಸೂರು,ಅ.24: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತಕ್ಕ ಬಂದಾಗಿನಿಂದ ಬಿಜೆಪಿಯವರು ಸರ್ಕಾರವನ್ನು ಅಸ್ಥಿರಗೊಳಿಸಲು ಹೋಗಿ ಅವರೇ ಅಸ್ಥಿರಗೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಅವರೇ ಅಸ್ಥಿರವಾಗುತ್ತಿದ್ದಾರೆ. 5 ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಮಂಡ್ಯದ ಕಾಂಗ್ರೆಸ್ ನಾಯಕರು ಈಗಾಗಲೇ ವಿದೇಶಕ್ಕೆ ಹೋಗಿ ಬಂದಿದ್ದಾರೆ. ಅವರು ಎಲ್ಲರೂ ಜೆಡಿಎಸ್‍ಗಾಗಿ ಕೆಲಸ ಮಾಡುತ್ತಾರೆ. ನಮ್ಮ ಎದುರಾಳಿ ಬಿಜೆಪಿ ಆಗಿರುವುದರಿಂದ ನಾವು ಒಟ್ಟಾಗಿ ಕೆಲಸಮಾಡಬೇಕಿದೆ ಎಂದು ಹೇಳಿದರು.
ಬಹಳ ವರ್ಷಗಳಿಂದ ಎರಡೂ ಪಕ್ಷಗಳ ವಿರುದ್ಧ ನಾವು ಹೋರಾಟ ಮಾಡಿಕೊಂಡು ಬಂದವರು. ಏಕಾಏಕಿ ಜೊತೆಯಲ್ಲಿ ಕೆಲಸ ಮಾಡಲು ಸ್ವಲ್ಪ ಇರಿಸು ಮುರಿಸು ಉಂಟಾಗುತ್ತದೆ. ನಾನೂ ಈಗ ಮಂಡ್ಯಕ್ಕೆ ಹೋಗುತ್ತೇನೆ. ಎಲ್ಲರ ಜೊತೆ ಮಾತಾಡುತ್ತೇನೆ. ಸಂಜೆ ಕೆ.ಆರ್.ನಗರದಲ್ಲಿ ಸಭೆ ಕೂಡ ಇದೆ ಎಂದು ತಿಳಿಸಿದರು.





