ಗ್ಲಾಕೋಮಾದ ಎಚ್ಚರಿಕೆ ಸಂಕೇತಗಳು ಮತ್ತು ಲಕ್ಷಣಗಳು ನಿಮಗೆ ತಿಳಿದಿರಲಿ
ಗ್ಲಾಕೋಮಾ ಕಣ್ಣುಗಳ ಆಪ್ಟಿಕ್ ನರಕ್ಕೆ ಹಾನಿಯನ್ನುಂಟು ಮಾಡುವ ಕಾಯಿಲೆಯಾಗಿದ್ದು,ಕಾಲಕ್ರಮೇಣ ಸ್ಥಿತಿಯನ್ನು ತೀವ್ರ ಹದಗೆಡಿಸುತ್ತದೆ. ಆಪ್ಟಿಕ್ ನರವು ಕಣ್ಣುಗಳಿಂದ ಮಾಹಿತಿಗಳನ್ನು ಮಿದುಳಿಗೆ ಪೂರೈಸುತ್ತದೆ. ಗ್ಲಾಕೋಮಾಕ್ಕೆ ಸಾಮಾನ್ಯವಾಗಿ ಕಣ್ಣುಗಳ ಒಳಗಿನ ಅತಿಯಾದ ಒತ್ತಡವು ಕಾರಣವಾಗುತ್ತದೆ. ಈ ಅತಿಯಾದ ಒತ್ತಡವು ಆಪ್ಟಿಕ್ ನರವನ್ನು ಹಾನಿಗೊಳಿಸುತ್ತದೆ ಮತ್ತು ಇದು ದೃಷ್ಟಿ ನಷ್ಟ ಅಥವಾ ಸಂಪೂರ್ಣ ಅಂಧತ್ವಕ್ಕೆ ಕಾರಣವಾಗುತ್ತದೆ.
ಗ್ಲಾಕೋಮಾದ ಲಕ್ಷಣಗಳು
ಗ್ಲಾಕೋಮಾದ ಲಕ್ಷಣಗಳು ಗೊತ್ತಿದ್ದರೆ ದೃಷ್ಟಿ ನಾಶವನ್ನು ತಡೆಯಲು ತ್ವರಿತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಗ್ಲಾಕೋಮಾ ಹೊಂದಿರುವ ಹೆಚ್ಚಿನ ಜನರಲ್ಲಿ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಅಥವಾ ನೋವು ಕಂಡು ಬರುವುದಿಲ್ಲ. ದೀರ್ಘಾವಧಿಯಲ್ಲಿ ದೃಷ್ಟಿ ನಾಶ ಉಂಟಾಗುವ ಮೊದಲು ಕಣ್ಣುಗಳನ್ನು ನಿಯಮಿತವಾಗಿ ನೇತ್ರವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಗ್ಲಾಕೋಮಾಕ್ಕೆ ಚಿಕಿತ್ಸೆ ಪಡೆಯುವುದು ಅಗತ್ಯವಾಗುತ್ತದೆ. ಕ್ರಮೇಣ ದೃಷ್ಟಿ ಮಂದಗೊಳ್ಳುವುದು ಗ್ಲಾಕೋಮಾದ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ತೀವ್ರ ಕಣ್ಣುನೋವು,ವಾಕರಿಕೆ,ಕಣ್ಣುಗಳು ಕೆಂಪಾಗುವುದು,ವಾಂತಿ,ದೃಷ್ಟಿಯಲ್ಲಿ ದಿಡೀರ್ ತೊಡಕು,ದೀಪಗಳ ಸುತ್ತ ಬಣ್ಣದ ವರ್ತುಲಗಳ ಗೋಚರ,ದಿಢೀರ್ ದೃಷ್ಟಿ ಮಸುಕು ಈ ಲಕ್ಷಣಗಳು ಕಂಡುಬಂದರೆ ತಕ್ಷಣ ನೇತ್ರವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.
ಗ್ಲಾಕೋಮಾದ ವಿಧಗಳು
ಓಪನ್ ಆ್ಯಂಗಲ್ ಗ್ಲಾಕೋಮಾ ಮತ್ತು ಆ್ಯಂಗಲ್ ಕ್ಲೋಸರ್ ಗ್ಲಾಕೋಮಾ ಇವು ಈ ಕಾಯಿಲೆಯ ಅತ್ಯಂತ ಸಾಮಾನ್ಯ ವಿಧಗಳಾಗಿವೆ. ಇತರ ವಿಧಗಳೂ ಇವೆ. ಬಾಲ್ಯಕಾಲದಲ್ಲಿ ಕಾಣಿಸಿಕೊಳ್ಳುವ ಗ್ಲಾಕೋಮಾ ಎಳವೆಯಲ್ಲಿಯೇ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ.
ಓಪನ್ ಆ್ಯಂಗಲ್ ಗ್ಲಾಕೋಮಾ
ಇದು ಸಾಮಾನ್ಯವಾಗಿ ಆರಂಭಿಕ ಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ಕಾಯಿಲೆಯು ಸಂಪೂರ್ಣವಾಗಿ ಆವರಿಸಿಕೊಳ್ಳುವವರೆಗೆ ದೃಷ್ಟಿಕೇತ್ರವು ನಷ್ಟಗೊಂಡ ಲಕ್ಷಣ ಕಂಡು ಬರುವುದಿಲ್ಲ. ಸಾಮಾನ್ಯವಾಗಿ ಎರಡೂ ಕಣ್ಣುಗಳಲ್ಲಿ ಪಾರ್ಶ್ವದೃಷ್ಟಿಯ ಕ್ರಮೇಣ ನಷ್ಟ,ಮುಂದುವರಿದ ಹಂತದಲ್ಲಿ ಸುರಂಗದಲ್ಲಿ ನೋಡುತ್ತಿರುವ ಭಾಸವನ್ನುಂಟು ಮಾಡುವ ಗೋಚರತೆ ಇವು ಇದರ ಲಕ್ಷಣಗಳಾಗಿವೆ.
ಆ್ಯಂಗಲ್ ಕ್ಲೋಸರ್ ಗ್ಲಾಕೋಮಾ
ಓಪನ್ ಆ್ಯಂಗಲ್ ಗ್ಲಾಕೋಮಾದೊಂದಿಗೆ ಹೋಲಿಸಿದರೆ ಇದು ಸಂಪೂರ್ಣ ವಿಭಿನ್ನ ಲಕ್ಷಣಗಳನ್ನು ಹೊಂದಿದೆ. ಏಕಾಏಕಿ ತೀವ್ರ ಕಣ್ಣುನೋವು, ತಲೆನೋವು, ವಾಕರಿಕೆ,ವಾಂತಿ ಮತ್ತು ಮಸುಕಾದ ದೃಷ್ಟಿ ಇವು ಈ ರೋಗದ ಲಕ್ಷಣಗಳಾಗಿವೆ. ಇಂತಹ ರೋಗಿಗಳ ಕಣ್ಣುಗಳು ಕೆಂಪಗಾಗಿ ಕಂಡುಬರುತ್ತವೆ ಮತ್ತು ಕಣ್ಣುಗೊಂಬೆಯು ದೊಡ್ಡದಾಗಬಹುದು ಹಾಗೂ ಬೆಳಕಿಗೆ ಸ್ಪಂದಿಸದಿರಬಹುದು. ಬರಿಗಣ್ಣಿಗೆ ಕಾರ್ನಿಯಾ ಮೋಡಗಳು ಆವರಿಸಿದಂತೆ ಕಂಡುಬರಬಹುದು.
ವ್ಯಕ್ತಿಯು ದೀರ್ಘಕಾಲೀನ ಆ್ಯಂಗಲ್ ಕ್ಲೋಸರ್ ಗ್ಲಾಕೋಮಾದಿಂದ ಬಳಲುತ್ತಿದ್ದರೆ ಕನ್ನಡಿಯಲ್ಲಿ ಅಥವಾ ಸ್ನೇಹಿತರಿಗೆ,ಕುಟುಂಬ ಸದಸ್ಯರಿಗೆ ಆತನ ಕಣ್ಣುಗಳು ಸಾಮಾನ್ಯವಾಗಿರುವಂತೆ ಕಂಡುಬರಬಹುದು. ಐ ಡ್ರಾಪ್ಗಳ ಬಳಕೆಯಿಂದ ಕೆಲವು ರೋಗಿಗಳು ಕೆಂಪುಕಣ್ಣುಗಳನ್ನು ಹೊಂದಿರಬಹುದು.
ಪ್ರಾಥಮಿಕ ಓಪನ್ ಆ್ಯಂಗಲ್ ಗ್ಲಾಕೋಮಾ ಯಾವುದೇ ಶಾಶ್ವತ ಹಾನಿಯುಂಟಾಗುವವರೆಗೆ ಕೆಲವೇ ಎಚ್ಚರಿಕೆಯ ಸಂಕೇತಗಳನ್ನು ತೋರಿಸಬಹುದು. ಆಗಾಗ್ಗೆ ಕಣ್ಣುಗಳ ತಪಾಸಣೆ ಇದನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ಇರುವ ಏಕಮಾತ್ರ ಮಾರ್ಗವಾಗಿದೆ.