ಕನ್ನಡ ರಾಜ್ಯೋತ್ಸವ ನೆಪದಲ್ಲಿ ಹಫ್ತಾ ವಸೂಲಿ ಮಾಡದಂತೆ ಕನ್ನಡಪರ ಸಂಘಟನೆಗಳಿಗೆ ಸಿಸಿಬಿ ಎಚ್ಚರಿಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.25: ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ನೆಪದಲ್ಲಿ ಉದ್ಯಮ ಸಂಸ್ಥೆಗಳಿಂದ ಹಣ ವಸೂಲಿ ಮಾಡುವವರಿಗೆ ಕೇಂದ್ರ ಅಪರಾಧ ವಿಭಾಗ ಎಚ್ಚರಿಕೆ ನೀಡಿದ್ದು, ಯಾರೂ ಹಪ್ತಾ ವಸೂಲಿ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ.
ನವೆಂಬರ್ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸುಲಿಗೆ ಮಾಡುವುದು ಪ್ರಮುಖ ದಂಧೆಯಾಗಿದೆ. ಹೋರಾಟಗಾರರ ಹೆಸರಿನಲ್ಲಿ ಕಿಡಿಗೇಡಿಗಳು ದುಬಾರಿ ಹಣ ವಸೂಲಿ ಮಾಡುವುದರಿಂದ ಅನಗತ್ಯವಾದ ಕಿರಿಕಿರಿಯಾಗುತ್ತದೆ. ಅಲ್ಲದೆ, ಕೋಟ್ಯಂತರ ರೂ. ಹಫ್ತಾ ನೀಡಬೇಕು ಎಂದು ಒತ್ತಾಯ ಮಾಡುವ ಘಟನೆಗಳು ನಡೆಯುತ್ತವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಬ್ಗಳು, ಸಾಫ್ಟ್ ವೇರ್ ಕಂಪನಿಗಳು, ದೊಡ್ಡ ಬಿಲ್ಡರ್ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜ್ಗಳನ್ನು ಪ್ರಮುಖ ಕೇಂದ್ರವನ್ನಾಗಿಸಿಕೊಂಡು ವಸೂಲಿ ಮಾಡಲಾಗುತ್ತದೆ. ಹೊರ ರಾಜ್ಯದ ಜನರನ್ನು ಗೂಂಡಾಗಳ ರೀತಿಯಲ್ಲಿ ಬೆದರಿಸಿ ಸುಲಭವಾಗಿ ಹಣ ವಸೂಲಿ ಮಾಡಲಾಗುತ್ತದೆ ಎಂದು ಎಚ್ಎಸ್ಆರ್ ಲೇಔಟ್ನ ಶಿಕ್ಷಣ ಸಂಸ್ಥೆಯೊಂದರ ಕಾರ್ಯದರ್ಶಿ ತಿಳಿಸಿದ್ದಾರೆ.
ಒಂದು ವೇಳೆ ಉದ್ಯಮಿಗಳು ಹಣ ನೀಡದಿದ್ದರೆ ಅಂಗಡಿ ಮುಂಗಟ್ಟುಗಳನ್ನು ಧ್ವಂಸಗೊಳಿಸುವಂತಹ ಪ್ರಕರಣಗಳು ಅನೇಕ ಕಡೆಗಳಲ್ಲಿ ಈ ಹಿಂದೆ ನಡೆದಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಎಂ.ಜಿ.ರಸ್ತೆಯ ರೆಸ್ಟೋರೆಂಟ್ ಮಾಲಕರೊಬ್ಬರು ಮಾತನಾಡಿ, ವ್ಯವಹಾರಸ್ಥರಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ. ಹೀಗಾಗಿ, ನಾವು ಹಣ ನೀಡುತ್ತೇವೆ. ಪೊಲೀಸರ ಮಧ್ಯಪ್ರವೇಶವಾದರೆ ರಿಯಾಯಿತಿ, ಚರ್ಚೆ ಎಲ್ಲವೂ ನಡೆಯಬೇಕಾಗುತ್ತದೆ ಎಂದು ಹೇಳಿದರು.
ಸುಲಿಗೆಯಂತಹ ಪ್ರಕರಣಗಳ ಬಗ್ಗೆ ದೂರು ನೀಡುವಂತೆ ಕಂಪನಿಗಳಿಗೆ ಸಿಸಿಬಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಅಲ್ಲದೇ ಶಂಕಿತ ವ್ಯಕ್ತಿಗಳ ಪಟ್ಟಿಯೊಂದನ್ನು ಸಿಸಿಬಿ ಪಟ್ಟಿ ಮಾಡಿದೆ. ಬಲವಂತವಾಗಿ ಹಣ ವಸೂಲಿ ಮಾಡದಂತೆ ಎಲ್ಲ ಕನ್ನಡ ಪರ ಸಂಘಟನೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







