ಸೌಹಾರ್ದತೆಗೆ ಇನ್ನೊಂದು ಹೆಸರು ಶಬರಿಮಲೆ ದೇವಸ್ಥಾನ-ವಾವರ್ ಮಸೀದಿ
ಕೋಮುದ್ವೇಷದ ಗಾಳಿಯೂ ಸೋಕದ ಸ್ನೇಹದ ಚರಿತ್ರೆಯಿದು…

ಕೃಪೆ: scroll.in
ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿರುವ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ವಿರುದ್ಧ ಪ್ರತಿಭಟನೆಗಳಿಂದಾಗಿ ಕಳೆದ ವಾರ ಕ್ಷೇತ್ರದಲ್ಲಿ ಉದ್ವಿಗ್ನ ಸ್ಥಿತಿಯಿತ್ತಾದರೂ ವಾವರ್ ಮಸೀದಿ ಮಾತ್ರ ಎಂದಿನಂತೆ ಶಾಂತಿಯುತವಾಗಿತ್ತು. ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿಯ ಮುಸ್ಲಿಂ ಸ್ನೇಹಿತನ ಹೆಸರನ್ನೇ ಈ ಮಸೀದಿಯು ಪಡೆದುಕೊಂಡಿದೆ. ಅಯ್ಯಪ್ಪ ಭಕ್ತರು ಪೆರಿಯಾರ್ ಹುಲಿ ಅಭಯಾರಣ್ಯದಲ್ಲಿಯ 40 ಕಿ.ಮೀ.ದೂರದ ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಮುನ್ನ ಎರುಮೇಲಿಯಲ್ಲಿರುವ ನಿನಾರ್ ಮಸೀದಿ ಎಂದೂ ಕರೆಯಲಾಗುವ ವಾವರ್ ಮಸೀದಿಗೆ ಭೇಟಿ ನೀಡುವುದು ಸಂಪ್ರದಾಯವಾಗಿದೆ. ಎರಡು ಅಯ್ಯಪ್ಪ ಮಂದಿರಗಳಾದ ಸಣ್ಣ ಚೆರಿಯಂಬಳಂ ದೇವಸ್ಥಾನ ಮತ್ತು ದೊಡ್ಡ ವಲಿಯಂಬಳಂ ದೇವಸ್ಥಾನಗಳ ನಡುವೆ ಈ ಮಸೀದಿಯಿದೆ.
ಮಾಸಿಕ ಪೂಜಾ ವಿಧಿಗಳಿಗಾಗಿ ಶಬರಿಮಲೆ ದೇವಸ್ಥಾನವು ಅ.17ರಂದು ಐದು ದಿನಗಳ ಮಟ್ಟಿಗೆ ತೆರೆಯಲ್ಪಟ್ಟಿದ್ದಾಗ ಎಂದಿನಂತೆ ಮಸೀದಿಯಲ್ಲಿ ಯಾತ್ರಿಗಳ ದಟ್ಟಣೆಯಿತ್ತು. ಮಸೀದಿಗೆ ಪ್ರದಕ್ಷಿಣೆಗೈದ ಅವರು ಆವರಣದಲ್ಲಿ ತೆಂಗಿನಕಾಯಿಗಳನ್ನು ಒಡೆದು,ಕಾಣಿಕೆಗಳನ್ನು ಸಲ್ಲಿಸಿದ್ದರು. ಮಸೀದಿಯ ಒಳಗಡೆ ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಝ್ ಸಲ್ಲಿಸುತ್ತಾರೆ.
ವಾವರ್ ಅಯ್ಯಪ್ಪ ಸ್ವಾಮಿಯ ಕುರಿತ ಐತಿಹ್ಯದ ಅಖಂಡ ಭಾಗವಾಗಿದ್ದಾರೆ. ಎರುಮೇಲಿಯಲ್ಲಿ ರಾಕ್ಷಸ ರಾಜಕುಮಾರಿ ಮಹಿಷಿಯನ್ನು ವಧಿಸಲು ಅಯ್ಯಪ್ಪ ಸ್ವಾಮಿಗೆ ವಾವರ್ ನೆರವಾಗಿದ್ದಾರೆ ಎಂದು ಐತಿಹ್ಯವು ಹೇಳುತ್ತದೆ. ವಿಜಯದ ಬಳಿಕ ಅಯ್ಯಪ್ಪ ಸ್ವಾಮಿ ಎರುಮೇಲಿಯಲ್ಲಿಯೇ ಇರುವಂತೆ ವಾವರ್‌ಗೆ ಸೂಚಿಸಿ ತಾನು ಶಬರಿಮಲೆಗೆ ಪಾದ ಬೆಳೆಸಿದ್ದ. ತನ್ನ ದರ್ಶನಕ್ಕಾಗಿ ಶಬರಿಮಲೆಗೆ ಬರುವ ಮೊದಲು ಎರುಮೇಲಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಅಯ್ಯಪ್ಪ ಸ್ವಾಮಿ ತನ್ನ ಭಕ್ತರಿಗೆ ಆದೇಶಿಸಿದ್ದು,ಅಯ್ಯಪ್ಪ ಭಕ್ತರು ಇಂದಿಗೂ ಈ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ.
“ಇದು ಧಾರ್ಮಿಕ ಸೌಹಾರ್ದತೆಯ ಉಜ್ವಲ ಉದಾಹರಣೆಯಾಗಿದೆ. ನಾವು ಈ ವಿಶಿಷ್ಟ ಸಂಪ್ರದಾಯದ ಭಾಗವಾಗಿದ್ದೇವೆ ಎನ್ನುವುದು ನಮಗೆ ಹೆಮ್ಮೆಯ ವಿಷಯವಾಗಿದೆ” ಎನ್ನುತ್ತಾರೆ ಮಸೀದಿಯ ಇಮಾಮರಾಗಿರುವ ಟಿ.ಎಸ್.ಅಬ್ದುಲ್ ಕರೀಂ(93). 1952ರಲ್ಲಿ ತನ್ನ ತಂದೆಯ ನಿಧನದ ಬಳಿಕ ಮಸೀದಿಯಲ್ಲಿ ನಿತ್ಯದ ಪ್ರಾರ್ಥನೆಗಳ ನೇತೃತ್ವದ ಹೊಣೆಗಾರಿಕೆಯನ್ನು ಕರೀಂ ನಿರ್ವಹಿಸುತ್ತಿದ್ದಾರೆ.
“ಮಂಡಲ ಮತ್ತು ಮಕರವಿಳಕ್ಕು ಋತುಗಳಲ್ಲಿ ಯಾತ್ರಿಗಳ ಮಹಾಪೂರವನ್ನು ನಾವು ನಿರೀಕ್ಷಿಸಿದ್ದೇವೆ. ಶುದ್ಧ ಕುಡಿಯುವ ನೀರು,ಟಾಯ್ಲೆಟ್‌ಗಳು ಮತ್ತು ಪಾರ್ಕಿಂಗ್ ಸ್ಥಳಗಳಂತಹ ಹೆಚ್ಚುವರಿ ಸೌಲಭ್ಯಗಳನ್ನು ನಾವು ಈ ಬಾರಿ ಯಾತ್ರಿಗಳಿಗೆ ಒದಗಿಸುತ್ತಿದ್ದೇವೆ” ಎಂದು ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಪಿ.ಎಚ್.ಶಹಜಹಾನ್ ಹೇಳಿದರು.
“ಈ ಹಿಂದೆ ಶಬರಿಮಲೆಗೆ ತೆರಳಿದ್ದಾಗಲೆಲ್ಲ ಪ್ರತಿಬಾರಿಯೂ ವಾವರ್ ಸ್ವಾಮಿಗೆ ಪ್ರಾರ್ಥನೆಗಳನ್ನು ಸಲ್ಲಿಸಿದ್ದೇನೆ. ಅದು ನನಗೆ ಅತ್ಯಂತ ತೃಪ್ತಿಯನ್ನು ನೀಡುತ್ತದೆ. ವಾವರ್ ಮಸೀದಿಗೆ ಭೇಟಿ ನೀಡದೆ ಶಬರಿಮಲೆ ಯಾತ್ರೆ ಪೂರ್ಣಗೊಳ್ಳುವುದಿಲ್ಲ. ಈ ಸಂಪ್ರದಾಯವು ಪ್ರಬಲ ಜಾತ್ಯತೀತ ಸಂದೇಶವನ್ನೂ ನೀಡುತ್ತಿದೆ” ಎಂದು ಮತ್ತೊಮ್ಮೆ ಯಾತ್ರೆಗೆ ಸಜ್ಜಾಗಿರುವ ಕೇರಳದ ಕೊಚ್ಚಿಯ ಶಿಕ್ಷಕ ಪ್ರಸಾದ್ ಕುಮಾರ್(35) ಹೇಳಿದರು.
ನೂರಾರು ವರ್ಷಗಳ ಸಂಪ್ರದಾಯ
ನಿರ್ಮಾಣ ಕಾಲದ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲವಾದರೂ ವಾವರ್ ಮಸೀದಿಯು ಸುಮಾರು 500 ವರ್ಷಗಳ ಹಿಂದೆ ನಿರ್ಮಾಣಗೊಂಡಿತ್ತು ಎನ್ನಲಾಗಿದೆ. ಜೋಪಡಿಯ ರೂಪದಲ್ಲಿ ಆರಂಭಗೊಂಡಿದ್ದ ಮಸೀದಿಯು ಕಾಲಕಾಲಕ್ಕೆ ನವೀಕರಣಗೊಳ್ಳುತ್ತಲೇ ಬಂದಿದೆ. 2001ರಲ್ಲಿ ಕಾಂಕ್ರೀಟ್ ಕಟ್ಟಡವು ನಿರ್ಮಾಣಗೊಂಡಿದೆ.‘ನನ್ನ ತಂದೆ ಇಮಾಮರಾಗಿದ್ದಾಗ ಇದು ಹಂಚಿನ ಛಾವಣಿಯನ್ನು ಹೊಂದಿತ್ತು’ ಎನ್ನುತ್ತಾರೆ ಕರೀಂ.
ಅಯ್ಯಪ್ಪ ಭಕ್ತರು ಮಸೀದಿಯ ಮುಖ್ಯ ನಮಾಝ್ ಹಾಲ್ ಅನ್ನು ಪ್ರವೇಶಿಸುವುದಿಲ್ಲ. ಅವರು ಪ್ರಾರ್ಥನೆಗಳನ್ನು ಸಲ್ಲಿಸಲು ಇಲ್ಲಿ ಗೋರಿಯಿಲ್ಲ. ಹೀಗಾಗಿ ಅವರು ನಮಾಝ್ ಹಾಲ್‌ಗೆ ಪ್ರದಕ್ಷಿಣೆಯನ್ನು ಹಾಕುತ್ತಾರೆ ಎಂದು ಶಹಜಹಾನ್ ತಿಳಿಸಿದರು.
ಅಯ್ಯಪ್ಪ ಭಕ್ತರೆಂದೂ ಮಸೀದಿಗೆ ಬೆನ್ನು ತೋರಿಸುವುದಿಲ್ಲ. ಪ್ರಾರ್ಥನೆಯನ್ನು ಹೇಳುತ್ತ ಅವರು ನಿಧಾನವಾಗಿ ಹಿಂದಕ್ಕೆ ಸರಿಯುತ್ತಾರೆ. ಇದು ವಾವರ್‌ನೆಡೆಗೆ ಅವರ ಭಕ್ತಿಯ ಗೌರವವನ್ನು ತೋರಿಸುತ್ತದೆ ಎಂದರು. ಮಸೀದಿಯ ಭೇಟಿಯ ಬಳಿಕ ಯಾತ್ರಿಗಳು ಎರುಮೇಲಿಯಲ್ಲಿನ ಎರಡು ಅಯ್ಯಪ್ಪ ಮಂದಿರಗಳನ್ನು ದರ್ಶಿಸುತ್ತಾರೆ. ಇದು ಹಲವಾರು ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದು ದೇವಸ್ಥಾನಗಳ ಆಡಳಿತವನ್ನು ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಯ ನಿವೃತ್ತ ಉದ್ಯೋಗಿ ವಿಶ್ವಂಭರನ್ ಹೇಳಿದರು.
ಕೋಮು ಸೌಹಾರ್ದತೆಯ ಆಚರಣೆ
ಮಂಡಲ ಮತ್ತು ಮಕರವಿಳಕ್ಕು ಋತುಗಳಲ್ಲಿ ಎರಡು ದೊಡ್ಡ ಉತ್ಸವಗಳು ಎರುಮೇಲಿಯಲ್ಲಿ ನಡೆಯುತ್ತವೆ.ಧನು ಮಲಯಾಳಂ ಮಾಸದ 26ನೇ ದಿನ ವಾವರ್ ಮಸೀದಿ ಸಮಿತಿಯು ಚಂದನಕ್ಕುಡಂ ಮೆರವಣಿಗೆಯನ್ನು ಆಯೋಜಿಸಿದರೆ, ಮರುದಿನ ದೇವಸ್ವಂ ಮಂಡಳಿಯು ಪೆಟ್ಟ ಥುಳ್ಳಲ್ ಉತ್ಸವವನ್ನು ನಡೆಸುತ್ತದೆ.
ಮೊದಲ ದಿನ ಮೂರು ಅಲಂಕೃತ ಆನೆಗಳು ಅಯ್ಯಪ್ಪ ಯಾತ್ರಿಗಳನ್ನು ಮಸೀದಿಗೆ ಸ್ವಾಗತಿಸುತ್ತವೆ. ಕೇರಳದ ಸಾಂಪ್ರದಾಯಿಕ ಚೆಂಡೆವಾದನ ಮತ್ತು ಸಂಗೀತದೊಂದಿಗೆ ಹೆಜ್ಜೆ ಹಾಕುವ ಯಾತ್ರಿಗಳು ಎರುಮೇಲಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ಮರುದಿನ ನಸುಕಿನ ಮೂರು ಗಂಟೆಗೆ ಮಸೀದಿಗೆ ಮರಳುತ್ತಾರೆ. ಪ್ರತಿವರ್ಷ ಮೆರವಣಿಗೆಗಾಗಿ ನಾಲ್ಕು ಲ.ರೂ.ಗಳನ್ನು ವ್ಯಯಿಸಲಾಗುತ್ತದೆ ಎಂದು ಶಹಜಹಾನ್ ತಿಳಿಸಿದರು.
ಮೆರವಣಿಗೆಯ ಮರುದಿನ ಪೆಟ್ಟ ಥುಳ್ಳಲ್ ಉತ್ಸವ ಆರಂಭಗೊಳ್ಳುತ್ತದೆ. ಇದರಲ್ಲಿ ಪಾಲ್ಗೊಳ್ಳುವ ಜಾನಪದ ಕಲಾವಿದರು ಮಹಿಷಿಯ ವಿರುದ್ಧ ಅಯ್ಯಪ್ಪ ಸ್ವಾಮಿ ವಿಜಯ ಸಾಧಿಸಿದ ಕಥೆಯನ್ನು ನೃತ್ಯನಾಟಕ ರೂಪದಲ್ಲಿ ಸಾದರಪಡಿಸುತ್ತಾರೆ. ಚೆರಿಯಂಬಳಂನಲ್ಲಿ ತಮ್ಮ ಪ್ರದರ್ಶನವನ್ನು ಆರಂಭಿಸುವ ಅವರು ವಾವರ್ ಮಸೀದಿಗೆ ತೆರಳಿದ ಬಳಿಕ ವಲಿಯಂಬಳಂ ತಲುಪುತ್ತಾರೆ. ಅಲ್ಲಿ ದೇವಸ್ವಂ ಮಂಡಳಿಯ ಅಧಿಕಾರಿಗಳು ಅವರನ್ನು ಬರಮಾಡಿಕೊಳ್ಳುತ್ತಾರೆ.
ಈ ಎರಡು ಉತ್ಸವಗಳು ಎರುಮೇಲಿಯಲ್ಲಿನ ಕೋಮು ಸೌಹಾರ್ದದ ಉಜ್ವಲ ಉದಾಹರಣೆಗಳಾಗಿವೆ ಎಂದು ವಿಶ್ವಂಭರನ್ ಹೇಳಿದರು.
ಎರುಮೇಲಿಯ ವ್ಯಾಪಾರಿಗಳಿಗೆ ಸುಗ್ಗಿ
ಯಾತ್ರಾಋತು ಅಂತ್ಯಗೊಂಡಾಗ ಮಸೀದಿ ಮತ್ತು ಎರಡು ದೇವಸ್ಥಾನಗಳ ಕಾಣಿಕೆ ಪೆಟ್ಟಿಗೆಗಳು ತುಂಬಿರುತ್ತವೆ. ಕಳೆದ ವರ್ಷ ಕಾಣಿಕೆಯ ರೂಪದಲ್ಲಿ 35 ಲ.ರೂ.ಗಳು ಮಸೀದಿಗೆ ಸಂದಾಯವಾಗಿವೆ. ಕಾಳುಮೆಣಸು,ಅಕ್ಕಿ,ಬಟ್ಟೆಯಂತಹ ಕಾಣಿಕೆಗಳೂ ಬರುತ್ತವೆ ಮತ್ತು ಯಾತ್ರಾಋತುವಿನ ಅಂತ್ಯದಲ್ಲಿ ಅವುಗಳನ್ನು ಹರಾಜು ಹಾಕಲಾಗುತ್ತದೆ. ಇದು ಹೆಚ್ಚಿನ ಆದಾಯವನ್ನು ನೀಡುತ್ತದೆ. ಕೆಲವು ವಿಶೇಷ ಕಾಣಿಕೆಗಳನ್ನು ನಾವು ಪ್ರದರ್ಶನಕ್ಕೆ ಇರಿಸಿದ್ದೇವೆ. ಹಲವು ವರ್ಷಗಳ ಹಿಂದೆ ಭಕ್ತರೋರ್ವರು ಕಾಣಿಕೆಯಾಗಿ ಸಲ್ಲಿಸಿದ್ದ ಪಂಚಲೋಹದ ಬಿಲ್ಲು-ಬಾಣವನ್ನೂ ನಾವು ಇಲ್ಲಿ ಇರಿಸಿದ್ದೇವೆ ಎಂದು ಶಹಜಹಾನ್ ತಿಳಿಸಿದರು.
ಯಾತ್ರಾಋತು ಸ್ಥಳೀಯ ವ್ಯಾಪಾರಿಗಳಿಗೆ ಸುಗ್ಗಿಯ ಕಾಲವಾಗಿದೆ. ಮಂಡಲ-ಮಕರವಿಳಕ್ಕು ಸಂದರ್ಭಗಳಲ್ಲಿ ಎರುಮೇಲಿಯಲ್ಲಿ ವ್ಯಾಪಾರ ಬಿರುಸಾಗಿರುತ್ತದೆ ಎಂದು ಸ್ಮರಣಿಕೆಗಳ ಅಂಗಡಿಯನ್ನು ಹೊಂದಿರುವ ಪಿ.ಎಸ್.ಹರೀಶ ತಿಳಿಸಿದರು.
ವಿಭಜನೆಯ ಅಜೆಂಡಾ ನಮಗೆ ಬೇಡ
ಅಂದ ಹಾಗೆ ಅಯ್ಯಪ್ಪ ಸ್ವಾಮಿಯೊಂದಿಗೆ ವಾವರ್ ಸ್ವಾಮಿಯ ಆರಾಧನೆ ಎಲ್ಲರಿಗೂ ಸಂತಸವನ್ನುಂಟು ಮಾಡಿಲ್ಲ. ಅಯ್ಯಪ್ಪ ಮತ್ತು ವಾವರ್ ಸ್ನೇಹಿತರಾಗಿದ್ದರು ಎನ್ನುವುದನ್ನು ತಾನು ನಂಬುವುದಿಲ್ಲ. ಅವರು ಸ್ನೇಹಿತರೇ ಆಗಿದ್ದರೆ ವಾವರ್ ಮುಸ್ಲಿಂ ಆಗಿರಲಿಕ್ಕಿಲ್ಲ ಎಂದು ಹಿಂದೂ ಐಕ್ಯವೇದಿಯ ನಾಯಕಿ ಪಿ.ಕೆ ಶಶಿಕಲಾ ಕಳೆದ ವರ್ಷ ಸಂದರ್ಶನವೊಂದರಲ್ಲಿ ಹೇಳಿದ್ದರು. ಕೇರಳದಲ್ಲಿಯ ಹಿಂದುತ್ವ ಗುಂಪುಗಳು ಹಲವಾರು ವರ್ಷಗಳಿಂದ ಪ್ರತಿಪಾದಿಸುತ್ತಿರುವುದನ್ನೇ ಶಶಿಕಲಾ ಬಹಿರಂಗವಾಗಿ ವ್ಯಕ್ತಪಡಿಸಿದ್ದರು.
ಆದರೆ ಅವರ ವಾದಗಳು ಎರುಮೇಲಿ ನಿವಾಸಿಗಳ ಮೇಲೆ ಯಾವುದೇ ಪರಿಣಾಮಗಳನ್ನು ಬೀರಿಲ್ಲ.
ಎರುಮೇಲಿ ಧಾರ್ಮಿಕ ಸಹಿಷ್ಣುತೆಯ ಶ್ರೀಮಂತ ಇತಿಹಾಸವನ್ನು ಹೊಂದಿದೆ ಎಂದು ಹೇಳಿದ ಶಹಜಹಾನ್,1992ರಲ್ಲಿ ಬಾಬರಿ ಮಸೀದಿಯು ಧ್ವಂಸಗೊಂಡ ದಿನ ನೂರಾರು ಯಾತ್ರಿಗಳು ವಾವರ್ ಮಸೀದಿಗೆ ಭೇಟಿ ನೀಡಿದ್ದರು. ಅಂದು ಮುಸ್ಲಿಮರೂ ನಮಾಝ್‌ಗಳನ್ನು ಸಲ್ಲಿಸಿದ್ದರು ಎಂದು ಉದಾಹರಣೆಯನ್ನು ನೀಡಿದರು.
ಸಾಮಾಜಿಕ ಅಶಾಂತಿಯನ್ನುಂಟು ಮಾಡುವ ಉದ್ದೇಶದಿಂದ ವಾವರ್ ಹೆಸರನ್ನು ಕೆಡಿಸಲು ‘ಕೋಮುವಾದಿ ಗುಂಪುಗಳು’ ಪ್ರಯತ್ನಿಸುತ್ತಿವೆ. ಆದರೆ ಅವರ ವಿಭಜನೆ ಅಜೆಂಡಾವನ್ನು ಎರುಮೇಲಿಯ ಜನರು ಒಪ್ಪಿಕೊಳ್ಳುವುದಿಲ್ಲ. ನಾವು ಕೋಮು ಸೌಹಾರ್ದವನ್ನು ಕಾಯ್ದುಕೊಳ್ಳಲು ಬದ್ಧರಾಗಿದ್ದೇವೆ ಎಂದು ವ್ಯಾಪಾರಿ ಅನೀಶ್ ಹಸನ್ ತಿಳಿಸಿದರು. ಎರುಮೇಲಿಯಲ್ಲಿ ಹೋಟೆಲ್ ನಡೆಸುತ್ತಿರುವ ಕೆ.ಜಿ.ಶಿಜು ಅವರೂ ಇದನ್ನೇ ಪ್ರತಿಧ್ವನಿಸಿದರು. ವಾವರ್ ಮತ್ತು ಅಯ್ಯಪ್ಪ ಸ್ವಾಮಿ ಎರುಮೇಲಿಯನ್ನು ಪವಿತ್ರ ನೆಲವನ್ನಾಗಿ ಮಾಡಿದ್ದಾರೆ. ನಮ್ಮ ಸಮಾಜದಲ್ಲಿ ಒಡಕನ್ನುಂಟು ಮಾಡಲು ಮತ್ತು ನಮ್ಮ ಸಂಪ್ರದಾಯಗಳನ್ನು ಬದಲಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.







