ಉಪ ಚುನಾವಣೆ: ಮದ್ಯ ಮಾರಾಟ ನಿಷೇಧ
ಮಂಗಳೂರು, ಅ.25: ದ.ಕ. ಜಿಲ್ಲಾ ತಾಲೂಕು ಪಂಚಾಯತ್ ಸದಸ್ಯ ಸ್ಥಾನಗಳನ್ನು ಭರ್ತಿ ಮಾಡಲು ಉಪ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನವು ನಡೆಸುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಮದ್ಯ ಮಾರಾಟ ನಿಷೇಧಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಅಬಕಾರಿ ಸನ್ನದುಗಳ ನಿಯಮದಲ್ಲಿ ಅಧಿಕಾರ ಚಲಾಯಿಸಿ ಜಿಲ್ಲೆಯ ಬಂಟ್ವಾಳ ತಾಪಂ ಸಂಗಬೆಟ್ಟು ಕ್ಷೇತ್ರ ಮತ್ತು ಬೆಳ್ತಂಗಡಿ ಪಪಂ ವ್ಯಾಪ್ತಿಯಲ್ಲಿ ನಡೆಯುವ ಮತದಾನದ ಸಲುವಾಗಿ ಅ.26ರ ಸಂಜೆ 6ರಿಂದ ಅ.28ರ ಸಂಜೆ 6 ಗಂಟೆವರೆಗೆ ಮತ್ತು ಮತ ಎಣಿಕೆಯ ಸಲುವಾಗಿ ಅ.31ರಂದು ಬೆಳಗ್ಗೆ 6ರಿಂದ ಸಂಜೆ 8 ಗಂಟೆವರೆಗೆ ಮದ್ಯ ಮಾರಾಟ ನಿಷೇಧಗೊಳಿಸಲಾಗಿದೆ.
ಮತ ನಡೆಸುವ ಪ್ರದೇಶವಾದ ಬೆಳ್ತಂಗಡಿ ಪಪಂ ಕಚೇರಿ ಮತ್ತು ಬಂಟ್ವಾಳ ತಾಲೂಕು ಕಚೇರಿಯ 3 ಕಿ.ಮೀ. ವ್ಯಾಪ್ತಿ ಪ್ರದೇಶಗಳನ್ನು ಮದ್ಯ ಮುಕ್ತ ದಿನಗಳೆಂದು ಘೋಷಿಸಿ ಈ ದಿನಗಳಲ್ಲಿ ಎಲ್ಲ ವಿಧದ ಮದ್ಯದಂಗಡಿಗಳನ್ನು ಮತ್ತು ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಈ ದಿನಗಳಲ್ಲಿ ಬಂಟ್ವಾಳ ತಾಪಂ ಸಂಗಬೆಟ್ಟು ಕ್ಷೇತ್ರ ಮತ್ತು ಬೆಳ್ತಂಗಡಿ ಪಪಂ ವ್ಯಾಪ್ತಿಯಲ್ಲಿ ಸೂಚಿತ ಅವಧಿಯಲ್ಲಿ ಯಾವುದೇ ಹೊಟೇಲ್‌ಗಳಲ್ಲಾಗಲಿ, ಮದ್ಯ ಮಾರಾಟ ಅಥವಾ ಸರಬರಾಜು ಮಾಡುವುದನ್ನು ಕೂಡ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.







