ರಾಜೀನಾಮೆಯನ್ನು ವಾಪಸ್ ಪಡೆದ ಅಸ್ಸಾಂ ಬಿಜೆಪಿ ಶಾಸಕ

ಗುವಾಹಟಿ,ಅ.25: ಬಿಜೆಪಿ ಶಾಸಕ ತೇರಾಷ್ ಗೋವಾಲಾ ಅವರು ಕೆಲವು ವಿಷಯಗಳಲ್ಲಿ ಅಸಮಾಧಾನಗೊಂಡು ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರಿಗೆ ಸಲ್ಲಿಸಿದ್ದ ರಾಜೀನಾಮೆಯನ್ನು ಗುರುವಾರ ವಾಪಸ್ ಪಡೆದಿದ್ದಾರೆ. ಗೋವಾಲಾ ಅವರು ತನ್ನ ರಾಜೀನಾಮೆಯನ್ನು ವಿಧಾನಸಭಾ ಸ್ಪೀಕರ್‌ಗೆ ಸಲ್ಲಿಸಿರಲಿಲ್ಲ.
ಕಳೆದ ರಾತ್ರಿ ತನ್ನನ್ನು ಭೇಟಿಗೆ ಕರೆಸಿಕೊಂಡಿದ್ದ ಮುಖ್ಯಮಂತ್ರಿಗಳು ತನ್ನ ಕಳವಳಗಳನ್ನು ಅರ್ಥ ಮಾಡಿಕೊಂಡಿದ್ದಾರೆ ಮತ್ತು ಭವಿಷ್ಯದಲ್ಲಿ ಅವುಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ರಾಜೀನಾಮೆಯನ್ನು ವಾಪಸ್ ಪಡೆದಿದ್ದೇನೆ ಎಂದು ಮೊದಲ ಬಾರಿಗೆ ಶಾಸಕರಾಗಿರುವ ಗೋವಾಲಾ ಸುದ್ದಿಸಂಸ್ಥೆಗೆ ತಿಳಿಸಿದರು.
ತನ್ನ ಕ್ಷೇತ್ರದಲ್ಲಿರುವ ಅಸ್ಸಾಂ ಗ್ಯಾಸ್ ಕಂಪನಿಯಲ್ಲಿ ಇತ್ತೀಚಿನ ನೇಮಕಗಳಲ್ಲಿ ತನ್ನನ್ನು ಕಡೆಗಣಿಸಲಾಗಿದೆ ಎಂದು ಗೋವಾಲಾ ಅ.23ರಂದು ಆರೋಪಿಸಿದ್ದರು.
Next Story





