ಖಶೋಗಿ ಹತ್ಯೆಯ ಧ್ವನಿಮುದ್ರಣವನ್ನು ವೀಕ್ಷಿಸಿದ ಸಿಐಎ ಮುಖ್ಯಸ್ಥೆ

ವಾಶಿಂಗ್ಟನ್, ಅ. 25: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಪ್ರಮುಖ ಪುರಾವೆಯಾಗಿರುವ ಧ್ವನಿಮುದ್ರಣವನ್ನು ಟರ್ಕಿ ಅಮೆರಿಕದೊಂದಿಗೆ ಹಂಚಿಕೊಂಡಿದೆ.
ಅಮೆರಿಕದ ಪ್ರಮುಖ ಗುಪ್ತಚರ ಸಂಸ್ಥೆ ಸಿಐಎಯ ನಿರ್ದೇಶಕಿ ಗಿನಾ ಹ್ಯಾಸ್ಪೆಲ್ ಈ ಧ್ವನಿಮುದ್ರಣವನ್ನು ಕೇಳಿದ್ದಾರೆ.
ಟರ್ಕಿಯ ನಗರ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ನಡೆದ ಖಶೋಗಿಯ ವಿಚಾರಣೆ, ಚಿತ್ರಹಿಂಸೆ ಮತ್ತು ಹತ್ಯೆ ಸಂದರ್ಭದ ಧ್ವನಿಗಳನ್ನು ಈ ಮುದ್ರಿಕೆ ಒಳಗೊಂಡಿದೆ ಎನ್ನಲಾಗಿದೆ.
ಸೋಮವಾರ ಟರ್ಕಿಗೆ ರಹಸ್ಯ ಭೇಟಿ ನೀಡಿದ ಹ್ಯಾಸ್ಪೆಲ್ ಈ ಧ್ವನಿಮುದ್ರಣವನ್ನು ಆಲಿಸಿದ್ದಾರೆ ಎಂದು ಅವರಿಗೆ ನಿಕಟವಾಗಿರುವ ಮೂಲಗಳು ಹೇಳಿವೆ.
ಈ ಧ್ವನಿಮುದ್ರಿಕೆಯು ಅತ್ಯಂತ ಸ್ಪಷ್ಟವಾಗಿದೆ ಹಾಗೂ ಖಶೋಗಿ ಹತ್ಯೆಗೆ ಸೌದಿ ಅರೇಬಿಯವನ್ನು ಹೊಣೆಯಾಗಿಸಲು ಅಮೆರಿಕದ ಮೇಲೆ ಹೆಚ್ಚಿನ ಒತ್ತಡವನ್ನು ಹೇರಬಹುದಾಗಿದೆ ಎಂದು ಮೂಲವೊಂದು ಹೇಳಿದೆ.
‘‘ಈ ಪುರಾವೆಯು ಚೆಂಡನ್ನು ವಾಶಿಂಗ್ಟನ್‌ನ ಅಂಗಳದಲ್ಲಿ ಇರಿಸುತ್ತದೆ’’ ಎಂದು ಸಿಐಎಯ ಮಾಜಿ ಅಧಿಕಾರಿಯೊಬ್ಬರು ಹೇಳುತ್ತಾರೆ.







