ಮೀಟೂ ಅಭಿಯಾನ ಪುರುಷ ದ್ವೇಷಿ ಅಲ್ಲ: ಹಿರಿಯ ವಕೀಲೆ ಹೇಮಲತಾ ಮಹಿಷಿ

ಬೆಂಗಳೂರು, ಅ.25: ಮೀಟೂ ಅಭಿಯಾನ ಪುರುಷ ದ್ವೇಷಿ ಎನ್ನುವ ರೀತಿಯಲ್ಲಿ ಕೆಲವರು ತಪ್ಪು ಅಭಿಪ್ರಾಯಗಳು ಮೂಡಿಸುತ್ತಿದ್ದಾರೆ. ಇದು ಯಾರ ವಿರುದ್ಧವು ಅಲ್ಲ. ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಹಿಳೆಯರು ಹಾಗೂ ಪುರುಷರು ಇಬ್ಬರು ಸೇರಿ ಜಾಗೃತಿ ಮೂಡಿಸುತ್ತಿರುವ ಅಭಿಯಾನವಾಗಿದೆ ಎಂದು ಹಿರಿಯ ವಕೀಲೆ ಹೇಮಲತಾ ಮಹಿಷಿ ಸ್ಪಷ್ಟ ಪಡಿಸಿದರು.
ಗುರುವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನಗರದ ಯುವಿಸಿಇ ಅಲುಮ್ನಿ ಅಸೋಸಿಯೇಷನ್‌ನಲ್ಲಿ ಮೀಟೂ ಅಭಿಯಾನದ ಭಾಗವಾಗಿ ಆಯೋಜಿಸಿದ್ದ ಮಹಿಳೆಯರ ಘನತೆ-ಭದ್ರತೆಗಾಗಿ ಆಗ್ರಹಿಸಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಶತಶತಮಾನಗಳಿಂದಲೂ ಮಹಿಳೆಯನ್ನು ಶೋಷಿಸುತ್ತಲೆ ಬರಲಾಗುತ್ತಿದೆ. ಇವತ್ತಿನ ಆಧುನಿಕ, ಪ್ರಜಾಪ್ರಾಭುತ್ವ ದೇಶದಲ್ಲೂ ಮಹಿಳೆ ತನ್ನ ಮೇಲಾದ ದೌರ್ಜನ್ಯವನ್ನು ಹೇಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಕೆಲವು ಮಹಿಳೆಯರು ಮೀಟೂ ಅಭಿಯಾನದ ಮುಖಾಂತರ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗ ಪಡಿಸುತ್ತಿದ್ದಾರೆ. ಇವರಿಗೆ ಬೆಂಬಲ ಕೊಡಬೇಕಾಗಿರುವುದು ಸಮಾಜದ ಕರ್ತವ್ಯವೆಂದು ಅವರು ಹೇಳಿದರು.
ಇಂದಿಗೂ ಸಿನೆಮಾ ಕ್ಷೇತ್ರದಲ್ಲಿ ಮಹಿಳೆಯನ್ನು ಬೋಗದ ವಸ್ತುವಾಗಿಯೆ ನೋಡುವಂತಹ ಪುರುಷ ಕೇಂದ್ರಿತ ಸಿನೆಮಾಗಳೆ ನಿರ್ಮಾಣವಾಗುತ್ತಿದೆ. ಸಿನೆಮಾಗಳಲ್ಲಿ ಮೂಡಿ ಬರುವ ಬಹುತೇಕ ದೃಶ್ಯಗಳನ್ನು ಗಮನಿಸಿದರೆ ಮಹಿಳಾ ವಿರೋಧಿಯಾಗಿಯೆ ಕಂಡು ಬರುತ್ತವೆ. ಇಂತಹ ವಾತಾವರಣ ಬದಲಾಗಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ, ಮೀಟೂ ಅಭಿಯಾನ ಗಾರ್ಮೆಂಟ್ಸ್ ಮಹಿಳಾ ನೌಕರರು, ಪೌರ ಕಾರ್ಮಿಕರು, ಸಾರಿಗೆ ಸಂಸ್ಥೆಯ ಮಹಿಳಾ ನೌಕರರ ಸೇರಿದಂತೆ ಕೆಳ ಹಂತದ ಮಹಿಳಾ ಸಮುದಾಯವನ್ನು ಒಳಗೊಳ್ಳಬೇಕಿದೆ. ಆಗ ಮಾತ್ರ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮೀಟೂ ಸಂಚಲನ ಮೂಡಿಸಲು ಸಾಧ್ಯವೆಂದು ತಿಳಿಸಿದರು.
ಸಿನೆಮಾ ರಂಗದಲ್ಲಿ ನಾಯಕಿಯರು ಹಲವು ರೀತಿಯಲ್ಲಿ ದೌರ್ಜನ್ಯಕ್ಕೆ ತುತ್ತಾಗಬೇಕಾದರೆ, ಇನ್ನು ಪೋಷಕ ನಟಿಯರ ಎಂತಹ ಪರಿಸ್ಥಿತಿಯನ್ನು ಎದುರಿಸುತ್ತಿರಬಹುದು. ಹೀಗಾಗಿ ಕಾನೂನಿನ ಜತೆ ಜತೆಗೆ ಪುರುಷರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಅವರು ತಿಳಿಸಿದರು.
ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ಮಾತನಾಡಿ, ಮಹಿಳೆಯರ ಮೇಲಿನ ನಡೆಯುತ್ತಿರುವ ದೌರ್ಜನ್ಯ ಮನೆಯ ಹಂತದಿಂದಲೆ ಪ್ರಾರಂಭವಾಗುತ್ತದೆ. ಹಾಗೂ ಇದಕ್ಕೆ ಪೂರಕವಾಗಿ ನಮ್ಮ ಮನುಧರ್ಮ ಶಾಸ್ತ್ರದಲ್ಲಿ, ತತ್ವಶಾಸ್ತ್ರಜ್ಞ ಅರಿಸ್ಟಾಟಲ್ ಸೇರಿದಂತೆ ಮಹಾನ್ ಚಿಂತಕರು ಮಹಿಳಾ ವಿರೋಧಿ ಹೇಳಿಕೆಗಳನ್ನೆ ನೀಡಿದ್ದಾರೆ. ಹೀಗಾಗಿ ಪುರುಷ ಪ್ರಧಾನ ವ್ಯವಸ್ಥೆಯ ಬದಲಾಗಿ ಮಾತೃ ಪ್ರಧಾನ ವ್ಯವಸ್ಥೆಯನ್ನು ಜಾರಿಗೆ ತರುವ ಅಗತ್ಯವಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತೆ ಜ್ಯೋತಿ ಇರ್ವತ್ತೂರು ಮಾತನಾಡಿ, ಮಾಧ್ಯಮ ಕ್ಷೇತ್ರವನ್ನು ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲಿ ನಿರ್ಣಾಯಕ ಹಂತದ ಹುದ್ದೆಗಳಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ. ಹೀಗಾಗಿ ಸಮಾಜದಲ್ಲಿ ಮಹಿಳೆಯರ ಬಗೆಗಿನ ಸಂವೇದನೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮೀಟೂ ಅಭಿಯಾನದ ಮೂಲಕ ಸಮಾಜದಲ್ಲಾಗುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳು ಹೊರಕ್ಕೆ ಬರಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಐಎಂಎಸ್‌ಎಸ್ ಉಪಾಧ್ಯಕ್ಷೆ ಡಾ.ಸುಧಾ ಕಾಮತ್, ಎಐಎಂಎಸ್‌ಎಸ್ ಅಧ್ಯಕ್ಷ ಅಪರ್ಣಾ, ರಾಜ್ಯ ಕಾರ್ಯದರ್ಶಿ ಶೋಭಾ ಮತ್ತಿತರರಿದ್ದರು.
ಹಕ್ಕೊತ್ತಾಯಗಳು
-ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿ
-ವಿಶಾಖ ಮಾರ್ಗಸೂಚಿ ಅನುಷ್ಠಾನಗೊಳ್ಳಲಿ
-ಲೈಂಗಿಕ ಕಿರುಕುಳ ನಿವಾರಣೆ ಸಮಿತಿಗಳನ್ನು ಎಲ್ಲ ಸರಕಾರಿ-ಖಾಸಗಿ ಸಂಸ್ಥೆಗಳಲ್ಲಿ ರಚಿಸಿರುವುದನ್ನು ಖಾತ್ರಿ ಮಾಡಬೇಕು
-ಲೈಂಗಿಕ ಕಿರುಕುಳ ಪ್ರಕರಣಗಳನ್ನು ಗರಿಷ್ಠ 6ತಿಂಗಳೊಳಗೆ ತೀರ್ಮಾನ ಮಾಡಬೇಕು.
-ಲೈಂಗಿಕ ಕಿರುಕುಳ ನೀಡಿದ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಖಾತ್ರಿ ಪಡಿಸಿ







