ಹನಿಟ್ರಾಪ್ ಪ್ರಕರಣ: ಸಿಸಿಬಿ ಪೊಲೀಸ್ ಸಿಬ್ಬಂದಿ ಅಮಾನತು

ಮಂಗಳೂರು, ಅ.25: ನಗರದಲ್ಲಿ ಕಳೆದ ಮಾರ್ಚ್‌ನಲ್ಲಿ ಹನಿಟ್ರಾಪ್ ಮೂಲಕ ನಿವೃತ್ತ ಅಧಿಕಾರಿಯಿಂದ 3 ಲಕ್ಷ ರೂ. ವಸೂಲಿ ಮಾಡಿರುವ ಪ್ರಕರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆ ಸಿಸಿಬಿ ಪೊಲೀಸ್ ಸಿಬ್ಬಂದಿ ಗಣೇಶ್ ಎಂಬವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಡಿಸಿಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಎಸಿಪಿ ರಾಜೇಂದ್ರ ಅವರು ತನಿಖೆ ನಡೆಸಿ ಸಿದ್ಧಪಡಿಸಿದ ವರದಿಯನ್ನು ಸೋಮವಾರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಅವರಿಗೆ ಸಲ್ಲಿಸಲಾಗಿದ್ದು, ಅದರ ಆಧಾರದಲ್ಲಿ ದೋಷಾರೋಪಣ ಪಟ್ಟಿಯನ್ನು ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆರೋಪ ಪಟ್ಟಿಯಲ್ಲಿ ಸಿಸಿಬಿ ಪೊಲೀಸ್ ಸಿಬ್ಬಂದಿ ಗಣೇಶ್ ಅವರ ಹೆಸರು ಇದ್ದ ಕಾರಣ ಅವರನ್ನು ಅಮಾನತು ಮಾಡಿ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಮಾ.20ರಂದು ಹನಿಟ್ರ್ಯಾಪ್ ಪ್ರಕರಣ ನಡೆದಿದ್ದು, ಮಾ.23ರಂದು 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಮಸಾಜ್ ಮಾಡಿಸಿಕೊಳ್ಳಲು ಮಹಿಳೆ ಬಳಸುತ್ತಿದ್ದ ಮೊಬೈಲ್ ಫೋನ್ ಸಂಖ್ಯೆ ಈ ಹಿಂದೆ ಸಿಸಿಬಿ ಪೊಲೀಸ್ ಸಿಬ್ಬಂದಿ ಗಣೇಶ್ ಅವರ ಬಳಿ ಇತ್ತು ಎಂಬ ಸಂಗತಿ ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಪೊಲೀಸ್ ಕಮಿಷನರ್ ಸಿಸಿಬಿ ಸಿಬ್ಬಂದಿಗೆ ನೋಟಿಸ್ ನೀಡಿದ್ದರು. ಇದಕ್ಕೆ ಉತ್ತರಿಸಿದ್ದ ಸಿಬ್ಬಂದಿ, ‘ಮಹಿಳೆ ಈ ಹಿಂದೆ ಪರಿಚಿತಳಾ ಗಿದ್ದರಿಂದ ಆಕೆಗೆ ತನ್ನ ಮೊಬೈಲ್ ಸಿಮ್ ನೀಡಿದ್ದೆ’ ಎಂಬ ಹೇಳಿಕೆ ನೀಡಿದ್ದರು.







