ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ವಿಚಾರ: ಆದೇಶ ಕಾಯ್ದಿರಿಸಿದ ಸಿಟಿ ಸಿವಿಲ್ ಕೋರ್ಟ್

ನಟಿ ಶ್ರುತಿ ಹರಿಹರನ್
ಬೆಂಗಳೂರು, ಅ.25: ಮೀ ಟೂ ಅಭಿಯಾನದ ಮೂಲಕ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳಿಗೆ ತಾತ್ಕಾಲಿಕ ತಡೆ ನೀಡಿ, ಆದೇಶವನ್ನು ಕಾಯ್ದಿರಿಸಿತು.
ಅರ್ಜುನ್ ಸರ್ಜಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ.ಆರ್.ಮೆಂಡ್ಸೋನಾ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲ ಶ್ಯಾಮ್ ಸುಂದರ್ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಚಾರಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಇದರಿಂದಾಗಿ ನಮ್ಮ ಕಕ್ಷಿದಾರರ ತೇಜೋವಧೆ ಆಗುತ್ತಿದೆ. ಹೀಗಾಗಿ, ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿ ಶ್ರುತಿ ಹರಿಹರನ್ ಮಾಡಿರುವ ಎಲ್ಲ ಪೋಸ್ಟ್ಗಳ ಕಾಪಿಗಳನ್ನು ಕೋರ್ಟ್ಗೆ ಸಲ್ಲಿಸಿದರು.
ಅಲ್ಲದೆ, ಮಾನಹಾನಿಗೆ 5 ಕೋಟಿ ರೂ.ಕೊಡುವಂತೆ ಅರ್ಜಿಯಲ್ಲಿ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಾಧೀಶರು ತಾತ್ಕಾಲಿಕ ತಡೆ ನೀಡಿ, ಅ.26ಕ್ಕೆ ಆದೇಶ ಕಾಯ್ದಿರಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.





