ಟಿಆರ್ಎಸ್ ಕಾರ್ಯಕರ್ತರ ಮೇಲೆ ಹಲ್ಲೆ: ಪ್ರವಾಸೋದ್ಯಮ ಸಚಿವ, ಪುತ್ರನ ವಿರುದ್ಧ ದೂರು ದಾಖಲು

ಅಝ್ಮೀರಾ ಚಂದುಲಾಲ್
ಹೈದರಾಬಾದ್,ಅ.25: ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ರಾಜ್ಯ ಹಂಗಾಮಿ ಪ್ರವಾಸೋದ್ಯಮ ಸಚಿವ ಅಝ್ಮೀರಾ ಚಂದುಲಾಲ್, ಅವರ ಪುತ್ರ ಹಾಗೂ ಕೆಲವು ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ.
ತೆಲಂಗಾಣದ ಮುಲುಗು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಚಂದುಲಾಲ್ ಅವರನ್ನು ಆಯ್ಕೆ ಮಾಡಿರುವುದರ ವಿರುದ್ಧ ಟಿಆರ್ಎಸ್ ಕಾರ್ಯಕರ್ತರು ಸೋಮವಾರ ವೆಂಕಟಪುರ ಮಂಡಲ್ನಲ್ಲಿ ಸಾರ್ವಜನಿಕ ಸಭೆ ನಡೆಸಲು ಮುಂದಾಗುತ್ತಿದ್ದಂತೆ ಸಚಿವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕಾರ್ಯಕರ್ತರು ನೀಡಿದ ದೂರಿನ ಆಧಾರದಲ್ಲಿ ಚಂದುಲಾಲ್, ಅವರ ಪುತ್ರ ಪ್ರಹ್ಲಾದ್ ಮತ್ತು ಅವರ ಕೆಲವು ಬೆಂಬಲಿಗರ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್ಗಳ ಜೊತೆಗೆ ಐಪಿಸಿ ಸೆಕ್ಷನ್ 147,341, 506 ಮತ್ತು ಇತರ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 7ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಚಂದುಲಾಲ್ ಅವರನ್ನು ಮುಲುಗು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ತೆಲಂಗಾಣ ರಾಷ್ಟ್ರ ಸಮಿತಿ ಆಯ್ಕೆ ಮಾಡಿದೆ. ಇದನ್ನು ಕೆಲವು ಸ್ಥಳೀಯ ಟಿಆರ್ಎಸ್ ನಾಯಕರು ವಿರೋಧಿಸಿದ್ದರು.





