ಪ್ಯಾರಾಗ್ಲೈಡರ್ ದುರಂತ: ಆಸ್ಟ್ರೇಲಿಯಾ ಎನ್‌ಆರ್‌ಐ ಹಿಮಾಚಲ ಪ್ರದೇಶದಲ್ಲಿ ಸಾವು
ಮಂಡಿ, ಅ. 25: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ಪ್ಯಾರಾಗ್ಲೈಡ್ ದುರಂತದಲ್ಲಿ ಭಾರತ ಮೂಲದ ಆಸ್ಟ್ರೇಲಿಯಾದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ.
ಬಿರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಸ್ಥಳದಿಂದ ಹಾರಾಟ ಆರಂಭಿಸಿದ ಬಳಿಕ ಪ್ಯಾರಾಗ್ಲೈಡರ್ ಸಂಜಯ್ ಕೆ.ಆರ್. ದೇವರಕೊಂಡ ನಾಪತ್ತೆಯಾಗಿದ್ದರು. ಕೂಡಲೇ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. 6 ಗಂಟೆ ಶೋಧದ ತರುವಾಯ ಅವರ ಮೃತದೇಹ ಜೋಗಿಂದರ್ ನಗರ ಸಮೀಪ ಪತ್ತೆಯಾಯಿತು. ಮೃತದೇಹ ವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸ್ಪಾನಿಶ್ ಪ್ಯಾರಾಗ್ಲೈಡರ್ ಜೋಸ್ ಲೀವಿಸ್ ಬುಧವಾರ ಪಾಲಂಪುರದಲ್ಲಿ ಪತ್ತೆಯಾಗಿದ್ದರು.
ಕಾಂಗ್ರಾದ ಬಿಲ್ ಬಿಲ್ಲಿಂಗ್‌ನಿಂದ ಶನಿವಾರ ಲೀವಿಸ್ ಹಾರಾಟ ಆರಂಭಿಸಿದ್ದರು. ಅನಂತರ ಅವರು ನಾಪತ್ತೆಯಾಗಿದ್ದರು. ಅವರನ್ನು ಶೋಧಿಸಲು ಬ್ರಿಜ್‌ನಾಥ್ ಎಸ್‌ಡಿಎಂ ಶೋಧನಾ ತಂಡವೊಂದನ್ನು ರೂಪಿಸಿದ್ದರು. ಲೀವಿಸ್ ಅವರನ್ನು ಪತ್ತೆ ಹಚ್ಚಿದ ತಂಡ ಅವರನ್ನು ಏರ್‌ಲಿಫ್ಟ್ ಮಾಡಿತ್ತು. ಇನ್ನೊಂದು ಘಟನೆಯಲ್ಲಿ ಸಿಂಗಾಪುರದ ಪ್ಯಾರಾಗ್ಲೈಡರ್ ನೋಕ್ ಚೂಕ್ ನಾ ಬಿಲ್ಲಿಂಗ್ ಹಿಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಮೃತದೇಹವನ್ನು ಶೋಧ ತಂಡ ಪತ್ತೆ ಹಚ್ಚಿತ್ತು.







