ಕ್ಷಮೆ ಕೇಳದ ಸರ್ಜಾ-ಶ್ರುತಿ: ವಾಣಿಜ್ಯ ಮಂಡಳಿಯ ಸಂಧಾನ ಸಭೆ ವಿಫಲ

ಬೆಂಗಳೂರು, ಅ.25: ನಟಿ ಶ್ರುತಿ ಹರಿಹರನ್ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿದ್ದ ಮೀ ಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಅಂಬರೀಶ್ ನೇತೃತ್ವದಲ್ಲಿ ನಗರದ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ.
ಗುರುವಾರ ನಗರದ ಆನಂದ್‌ರಾವ್ ವೃತ್ತದಲ್ಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ, ಹಿರಿಯ ನಟ ಅಂಬರೀಶ್, ಮಂಡಳಿ ಅಧ್ಯಕ್ಷ ಚಿನ್ನೇಗೌಡ, ಸಾ.ರಾ.ಗೋವಿಂದು ಸೇರಿದಂತೆ ಮತ್ತಿತರ ಸಹಯೋಗದಲ್ಲಿ ನಡೆದ ಸಂಧಾನ ಸಭೆಯಲ್ಲಿ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್‌ರನ್ನು ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದ್ದು, ಯಾರೂ ಕ್ಷಮೆ ಕೇಳಲು ಮುಂದಾಗಿಲ್ಲ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬರೀಶ್, ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಪಟ್ಟಂತೆ, ಎಲ್ಲ ಹಿರಿಯರು ಅವರ ಅಭಿಪ್ರಾಯವನ್ನು ಕೇಳಿದ್ದೇವೆ. ಅಂತಿಮ ನಿರ್ಧಾರವನ್ನು ಅವರಿಗೆ ಬಿಟ್ಟಿದ್ದು, ಅವರಿಗೆ ಕಾಲಾವಕಾಶ ನೀಡಿದ್ದೇವೆ. ಈ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದೆ. ಹೀಗಾಗಿ, ಮಂಡಳಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.
ಯಾರದ್ದು ತಪ್ಪು, ಯಾರದ್ದು ಸರಿ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ನಾನು ಘಟನೆಯನ್ನು ನೋಡಿಲ್ಲ. ಅವರವರ ಭಾವಕ್ಕೆ ಅವರವರು ಸರಿ ಎಂದು ಮಾತನಾಡಿದ್ದಾರೆ. ಹೀಗಾಗಿ, ನಾನು ಯಾರ ಪರವೂ ಇಲ್ಲ, ವಿರೋಧವು ಇಲ್ಲ ಎಂದು ಹೇಳಿದರು.
ಅಮಿತಾಬ್ ಬಚ್ಚನ್‌ಗೂ ಮೀ ಟೂ ಬಿಸಿ ತಟ್ಟಿದೆ. ಹಿಂದಿನ ದಿನಗಳಲ್ಲಿ ನಮ್ಮ ಸಮಸ್ಯೆಗಳನ್ನು ಇಲ್ಲಿಯೇ ಬಗೆಹರಿಸಿಕೊಳ್ಳುತ್ತಿದ್ದೆವು. ಇದೇ ಮೊದಲ ಬಾರಿಗೆ ನ್ಯಾಯಾಲಯದ ಮೆಟ್ಟಿಲೇರಿದೆ. ಸಿನಿಮಾ ಕಲಾವಿದರಿಗೆ ಯಾವುದೇ ಜಾತಿ, ಧರ್ಮವಿರುವುದಿಲ್ಲ. ಎಲ್ಲರ ಋಣವೂ ಸಿನಿಮಾದವರ ಮೇಲಿದೆ. ಹೀಗಾಗಿ, ಈ ಪ್ರಕರಣದಲ್ಲಿ ಜಾತಿ, ಧರ್ಮದ ಬಣ್ಣ ಬಳಿಯುವವರು ಮೂರ್ಖರು ಎಂದು ಕಿಡಿಕಾರಿದ ಅವರು, ಇದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಿರುವುದು ಸ್ವಾರ್ಥಕ್ಕಾಗಿ ಎಂದು ನುಡಿದರು.
ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಈ ಪ್ರಕರಣ ತಕ್ಷಣವೇ ಬಗೆಹರಿಸುವಂತಹ ವಿಷಯ ಅಲ್ಲ. ಹಾಗಾಗಿ ಇಬ್ಬರಿಗೂ ಸಮಯ ನೀಡಲಾಗಿದ್ದು, ಅವರ ಕುಟುಂಬಗಳ ಜತೆ ಚರ್ಚಿಸಿ ನಿರ್ಧರಿಸುತ್ತಾರೆ. ನೋವು ಪಟ್ಟಿರುವವರು ಅವರು. ಆದುದರಿಂದಾಗಿ ನಾವು ದಬ್ಬಾಳಿಕೆ ಮಾಡಲಾಗುವುದಿಲ್ಲ. ಅರ್ಜುನ್ ಸರ್ಜಾ ನಿರ್ದೇಶಕರಾಗಿ ತಮ್ಮ ಮಗಳನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ಇಬ್ಬರು ತಮ್ಮದೇ ಸರಿ ಎಂದು ವಾದಿಸುತ್ತಿದ್ದಾರೆ. ಹೀಗಾಗಿ, ಅವರಿಗೆ ಸಮಯ ನೀಡಿದ್ದೇವೆ. ಮುಂದೆ ಏನಾಗುತ್ತದೆಯೋ ಕಾದು ನೋಡೋಣ ಎಂದು ಅಂಬರೀಶ್ ಹೇಳಿದರು.
ಮೀ ಟೂ ನಲ್ಲಿ ಸಾಕಷ್ಟು ಕ್ಲಾಸ್‌ಗಳಿವೆ ಎಂದು ಕೇಳಿದ್ದೇನೆ. ಹಾಗಾಗಿ ಚಿತ್ರರಂಗಕ್ಕೆ ಯಾವುದೇ ಕಪ್ಪುಚುಕ್ಕೆ ಉಂಟಾಗುವುದಿಲ್ಲ. ಚಿತ್ರರಂಗದ ಸಮಸ್ಯೆಗಳಲ್ಲಿ ಹೊರಗಿನವರ ಪ್ರವೇಶವಾಗಬಾರದು ಎಂದ ಅವರು, ಅವರಿಬ್ಬರೂ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಾರೆ ಎಂಬುದಾದರೆ, ಮಧ್ಯದಲ್ಲಿ ನಾವು ಅಗತ್ಯವಿದೆಯಾ ಎಂದು ಅಂಬರೀಶ್ ಖಾರವಾಗಿ ಪ್ರಶ್ನಿಸಿದರು.
ಸಂದಾನದ ಮಾತೇ ಇಲ್ಲ
ಯಾವುದೇ ಕಾರಣಕ್ಕೂ ಸಂಧಾನದ ಮಾತೇ ಇಲ್ಲ. ಅಮಾಯಕರು ಇದಕ್ಕೆ ಬಲಿಯಾಗಬಾರದು. ಹಾಗಾಗಿ ಈ ಪ್ರಕರಣ ಒಂದು ಉದಾಹರಣೆಯಾಗಬೇಕು. ನನ್ನ ವಿರುದ್ಧ ಆರೋಪ ಮಾಡಿರುವವರಿಗೆ ಕಾಲವೇ ಉತ್ತರಿಸಲಿದೆ. ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಪರಾಧಿ ಯಾರು ಎಂಬುದು ತಿಳಿಯುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಕಾನೂನಿನ ಅಡಿಯಲ್ಲಿ ಎಲ್ಲರೂ ಒಂದೇ, ಹಾಗಾಗಿ ನ್ಯಾಯಾಲಯಕ್ಕೆ ನಾನು ಹೋಗಿದ್ದೇನೆ.
-ಅರ್ಜುನ್ ಸರ್ಜಾ, ಬಹುಭಾಷಾ ನಟ
ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ
ನಾನು ಯಾವುದೇ ತಪ್ಪುಮಾಡಿಲ್ಲ. ನನಗೆ ಸಮಸ್ಯೆಯಾಗಿದೆ. ನಾನು ಏಕೆ ಕ್ಷಮೆ ಕೇಳಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಹೆಣ್ಣನ್ನು ಬಲಿಪಶು ಮಾಡುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ನಾನು ಕನ್ನಡ ಚಿತ್ರರಂಗದಲ್ಲಿ 5 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ನನಗೆ ಚಲನಚಿತ್ರ ವಾಣಿಜ್ಯ ಮಂಡಳಿಯ ಮೇಲೆ ಸಂಪೂರ್ಣ ನಂಬಿಕೆ ಇದೆ. ಮಂಡಳಿಯ ಹಿರಿಯರು ನಾಳೆ(ಅ.26) ಬೆಳಗ್ಗೆ ತೀರ್ಮಾನ ಪ್ರಕಟಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲಿಯವರೆಗೂ ಕಾದು, ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ.
-ಶ್ರುತಿ ಹರಿಹರನ್, ನಟಿ
ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡುತ್ತಿರುವ ಹಿಂದೆ ದೊಡ್ಡ ಪಿತೂರಿ ನಡೆದಿದ್ದು, ರಾಜ್ಯದ ಹಿರಿಯ ನಟರಿಬ್ಬರು ಅವರ ಹಿಂದೆ ಇದ್ದಾರೆ. ಅರ್ಜುನ್ ತಮಿಳುನಾಡಿನಲ್ಲಿ ಆಂಜನೇಯ ದೇವಸ್ಥಾನ ಕಟ್ಟಿಸಿದ್ದು, ಪ್ರಧಾನಿ ಮೋದಿ ಅದನ್ನು ಉದ್ಘಾಟನೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ, ಅವರ ಹೆಸರನ್ನು ಕೆಡಿಸುವ ಉದ್ದೇಶದಿಂದ ಈ ಷಡ್ಯಂತರ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅರ್ಜುನ್ ಸರ್ಜಾ ವಿರುದ್ಧ ಸುಳ್ಳು ಪ್ರಚಾರ ಮಾಡಲು ಹಣ ನೀಡಲಾಗುತ್ತಿದೆ.
-ಪ್ರಕಾಶ್ ಸಂಬರಗಿ, ಅರ್ಜುನ್ ಸರ್ಜಾ ಆಪ್ತ







