ಭೀಮಾ ಕೋರೆಗಾಂವ್ ಹಿಂಸಾಚಾರ: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಹಾರಾಷ್ಟ್ರ ಸರಕಾರ

ಹೊಸದಿಲ್ಲಿ, ಅ. 25: ಬದಿಗಿರಿಸಲಾಗಿದ್ದ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ತನಿಖೆ ಪೂರ್ಣಗೊಳಿಸಲು ರಾಜ್ಯ ಪೊಲೀಸರಿಗೆ ಸಮಯಾವಕಾಶ ವಿಸ್ತರಿಸಿರುವುದನ್ನು ರದ್ದುಪಡಿಸಿ ಬಾಂಬೆ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಗುರುವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಹಿಂಸಾಚಾರ ಪ್ರಕರಣದ ತನಿಖೆ ಪೂರ್ಣಗೊಳಿಸಲು ಹಾಗೂ ಆರೋಪ ಪಟ್ಟಿ ಸಲ್ಲಿಸಲು ಮಹಾರಾಷ್ಟ್ರ ಪೊಲೀಸರಿಗೆ ಹೆಚ್ಚುವರಿ ಸಮಾಯಾವಕಾಶ ನೀಡಿದ ಕೆಳ ನ್ಯಾಯಾಲಯದ ತೀರ್ಪನ್ನು ಬಾಂಬೆ ಉಚ್ಚ ನ್ಯಾಯಾಲಯ ರದ್ದುಪಡಿಸಿತ್ತು. ಮಹಾರಾಷ್ಟ್ರ ಸರಕಾರದ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾದ ನ್ಯಾಯವಾದಿ ನಿಶಾಂತ್ ಕಟ್ನೇಶ್ವರ್ ಮನವಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕಾದ ಅಗತ್ಯತೆ ಇದೆ ಎಂದು ಮಾಡಿದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯ ಪೀಠ ಪರಿಗಣಿಸಿತು. ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸದೇ ಇದ್ದರೆ, ಸಮಯ ಮಿತಿಯೊಳಗಡೆ ಆರೋಪ ಪಟ್ಟಿ ಸಲ್ಲಿಸಲು ಸಾಧ್ಯವಾಗದೇ ಇರುವುದರಿಂದ ಹಿಂಸಾಚಾರದ ಪ್ರಕರಣದ ಆರೋಪಿಗಳು ಜಾಮೀನು ಪಡೆಯಲು ಶಕ್ತರಾಗುತ್ತಾರೆ ಎಂದು ವಕೀಲರು ಪ್ರತಿಪಾದಿಸಿದರು. ಮಹಾರಾಷ್ಟ್ರ ಸರಕಾರದ ಮನವಿಯನ್ನು ಅಕ್ಟೋಬರ್ 26ರಂದು ಆಲಿಸಲಾಗುವುದು ಎಂದು ನ್ಯಾಯಮೂರ್ತಿ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ಪೀಠ ಹೇಳಿದೆ. ಈ ಹಿಂದೆ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಪೊಲೀಸರು ಐವರು ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಿರುವುದರ ಮಧ್ಯೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು ಹಾಗೂ ಬಂಧನದ ಬಗ್ಗೆ ತನಿಖೆ ನಡೆಸಲು ಸಿಟ್ ನಿಯೋಜಿಸುವುದನ್ನು ತಿರಸ್ಕರಿಸಿತ್ತು.





