ಅಶಾಂತಿ ಹರಡುವ ಸಂದೇಶಗಳನ್ನು ತಡೆಯುವಂತೆ ಸಾಮಾಜಿಕ ಜಾಲತಾಣಗಳಿಗೆ ಸರಕಾರ ಸೂಚನೆ

ಹೊಸದಿಲ್ಲಿ,ಅ.25: ಅಶಾಂತಿಯನ್ನು ಹರಡುವ ಸಂದೇಶಗಳನ್ನು ಮತ್ತು ದೇಶದ ಭದ್ರತೆಗೆ ಹಾನಿಯುಂಟು ಮಾಟುವ ಸೈಬರ್ ಅಪರಾಧಗಳು ಮತ್ತು ಇತರ ಚಟುವಟಿಕೆಗಳನ್ನು ತಡೆಯುವಂತೆ ಗೂಗಲ್, ಟ್ವಿಟರ್, ವಾಟ್ಸ್‌ಆಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಿಗೆ ಸರಕಾರ ಸೂಚಿಸಿದೆ.
ಈ ಮೂರು ಸಾಮಾಜಿಕ ಜಾಲತಾಣಗಳ ಜೊತೆಗೆ ಫೇಸ್‌ಬುಕ್ ಹಾಗೂ ಇನ್ಸ್‌ಟಾಗ್ರಾಂಗೂ ಸೂಚನೆ ನೀಡಿರುವ ಸರಕಾರ, ತನಿಖೆ ನಡೆಸುವ ಉದ್ದೇಶದಿಂದ ಜಾರಿ ನಿರ್ದೇಶನಾಲಯ ಕೇಳುವಂತಹ ಮಾಹಿತಿಯನ್ನು ಪ್ರಾಮಾಣಿಕವಾಗಿ ಪ್ರಕಟಿಸುವ ವ್ಯವಸ್ಥೆಯನ್ನು ರೂಪಿಸಬೇಕೆಂದು ಆಗ್ರಹಿಸಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸುವ ನಕಲಿ ಸುದ್ದಿಗಳು ಮತ್ತು ಸಂದೇಶಗಳನ್ನು ಹರಡುವ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಆದರೂ ಭಾರತದಿಂದ ಹೊರಗೆ ಮುಖ್ಯಕಚೇರಿಗಳನ್ನು ಹೊಂದಿರುವ ಸಾಮಾಜಿಕ ಜಾಲತಾಣಗಳು ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ತಮ್ಮ ಗ್ರಾಹಕರ ಮಾಹಿತಿಯನ್ನು ಹಂಚಲು ನಿರಾಕರಿಸುತ್ತಾರೆ ಎಂದು ಅಧಿಕಾರಿಗಳು ದೂರಿಕೊಂಡಿದ್ದಾರೆ.
ತಮ್ಮ ವೇದಿಕೆಯನ್ನು ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಮತ್ತು ದ್ವೇಷ ಮತ್ತು ಹಿಂಸೆ ಹರಡುವ ಸಂದೇಶಗಳನ್ನು ಹರಡಲು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಕೆಲವು ಸಾಮಾಜಿಕ ಜಾಲತಾಣಗಳು ತಿಳಿಸಿವೆ. ತಮ್ಮ ವೇದಿಕೆಯ ದುರ್ಬಳಕೆಯನ್ನು ತಡೆಯಲು ಸಾಮಾಜಿಕ ಜಾಲತಾಣಗಳು ತೆಗೆದುಕೊಂಡಿರುವ ಕ್ರಮಗಳ ಪರಿಶೀಲನೆ ನಡೆಸಲು ಬುಧವಾರ ಕರೆಯಲಾಗಿದ್ದ ಸಭೆಯಲ್ಲಿ ಸರಕಾರದ ಪ್ರತಿನಿಧಿಗಳು ಈ ಸೂಚನೆಯನ್ನು ನೀಡಿದ್ದಾರೆ.





