ದಿಲ್ಲಿ: 8 ವರ್ಷದ ಮದ್ರಸ ವಿದ್ಯಾರ್ಥಿಯ ಥಳಿಸಿ ಹತ್ಯೆ

ಹೊಸದಿಲ್ಲಿ, ಅ.25: 8 ವರ್ಷದ ಮದ್ರಸ ವಿದ್ಯಾರ್ಥಿಯೊಬ್ಬನನ್ನು ತಂಡವೊಂದು ಥಳಿಸಿ ಹತ್ಯೆಗೈದಿರುವ ಘಟನೆ ದಿಲ್ಲಿಯ ಮಾಲ್ವಿಯಾ ನಗರದ ಬೇಗಂಪುರ್ ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಯುನೈಟೆಡ್ ಅಗೈನ್ಸ್ಟ್ ಹೇಟ್ ನ ತಂಡವು ಮದ್ರಸಕ್ಕೆ ಭೇಟಿ ನೀಡಿದ್ದು, ವಿದ್ಯಾರ್ಥಿಗಳು ಮತ್ತು ಮ್ಯಾನೇಜರ್ ಗಳ ಜೊತೆ ಮಾತನಾಡಿ ಮಾಹಿತಿ ಕಲೆ ಹಾಕಿದೆ. ಗುರುವಾರ ಮದ್ರಸ ತೆರೆದಿರಲಿಲ್ಲ. ಮದ್ರಸದ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದ ಕೆಲ ವಿದ್ಯಾರ್ಥಿಗಳು ಮದ್ರಸದ ಹೊರಗಡೆ ಆಟವಾಡುತ್ತಿದ್ದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಸ್ಥಳೀಯ ಯುವಕರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೆ, ಹಲ್ಲೆಯ ತೀವ್ರತೆಗೆ 8 ವರ್ಷದ ಬಾಲಕ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದ ಎಂದು ಇತರ ವಿದ್ಯಾರ್ಥಿಗಳು ಮತ್ತು ಮ್ಯಾನೇಜರ್ ಆರೋಪಿಸಿದ್ದಾರೆ.
ಸ್ಥಳೀಯರು ನಿರಂತರವಾಗಿ ತೊಂದರೆ ಕೊಡುತ್ತಿದ್ದರು. ಮದ್ರಸ ಮತ್ತು ಮಸೀದಿಯ ಆವರಣಕ್ಕೆ ವಿಸ್ಕಿಯ ಬಾಟಲಿಗಳನ್ನೂ ಎಸೆಯುತ್ತಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಇದುವರೆಗೂ ಯಾವುದೇ ಬಂಧನವಾಗಿಲ್ಲ ಎಂದು ವರದಿಯಾಗಿದೆ.





