ಸಿಬಿಐ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಸಿಟ್ ತನಿಖೆ ನಡೆಸುವಂತೆ ಪಿಐಎಲ್ ಆಗ್ರಹ
ಹೊಸದಿಲ್ಲಿ, ಅ. 25: ಸಿಬಿಐಯ ವಿಶೇಷ ನಿರ್ದೇಶಕರಾಗಿದ್ದು ಜವಾಬ್ದಾರಿ ನಿರ್ವಹಿಸಲು ವಿಫಲವಾಗಿರುವ ರಾಕೇಶ್ ಅಸ್ತಾನ ಸಹಿತ ಸಿಬಿಐ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪದ ಕುರಿತು ನ್ಯಾಯಾಲಯದ ನಿಗಾದಲ್ಲಿ ಸಿಟ್ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಭ್ರಷ್ಟಾಚಾರದ ವಿಚಾರಗಳು ತನಿಖಾ ಸಂಸ್ಥೆಯ ಮೇಲೆ ಪರಿಣಾಮ ಬೀರಬಹುದು ಹಾಗೂ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಶೀಘ್ರ ಆಲಿಕೆ ನಡೆಸಬೇಕು ಎಂದು ಸರಕಾರೇತರ ಸಂಸ್ಥೆ ‘ಕಾಮನ್ ಕಾಸ್’ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠಕ್ಕೆ ತಿಳಿಸಿದರು. ವಿವರಗಳನ್ನು ಸಲ್ಲಿಸುವಂತೆ ತಿಳಿಸಿದ ನ್ಯಾಯಮೂರ್ತಿ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನು ಕೂಡ ಒಳಗೊಂಡ ಪೀಠ, ಮನವಿಯ ತುರ್ತು ವಿಚಾರಣೆಗೆ ಪರಿಗಣಿಸಲಾಗುವುದು ಎಂದಿತು. ಸಿಬಿಐ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ನ್ಯಾಯಾಲಯದ ನಿಗಾದಲ್ಲಿ ವಿಶೇಷ ತನಿಖಾ ತಂಡ (ಸಿಟ್) ತನಿಖೆ ನಡೆಸಬೇಕು ಎಂದು ಕಾಮನ್ ಕಾಸ್ ಕೋರಿದೆ.





