ಕೊಳ್ನಾಡು ಗ್ರಾ.ಪಂ. ನಿಷೇಧಿಸಿದ ಜಾಗದಲ್ಲಿ ಮೀನು ಮಾರಾಟ: ಆರೋಪ
ಗ್ರಾಮ ಪಂಚಾಯತ್‍ನಿಂದ ದಂಡ

ಬಂಟ್ವಾಳ, ಅ. 25: ಕೊಳ್ನಾಡು ಗ್ರಾಮ ಪಂಚಾಯತ್ ನಿಷೇಧಿಸಿದ ಜಾಗದಲ್ಲಿ ಹಸಿಮೀನು ಮಾರಾಟ ಮಾಡಿದವರ ಮೇಲೆ ದಂಡ ವಿಧಿಸಿದ ವಿಚಾರದಲ್ಲಿ ಮೀನು ವ್ಯಾಪಾರಿಗಳ ಬೆಂಬಲಿಗರು ಗ್ರಾಮ ಪಂಚಾಯತ್‍ನಲ್ಲಿ ಜಮಾಯಿಸಿದ ಘಟನೆ ಗುರುವಾರ ನಡೆದಿದೆ.
ಕೊಳ್ನಾಡು ಗ್ರಾಮ ಪಂಚಾಯತ್ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವರ್ಷಗಳ ಹಿಂದೆ 25 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸಲಾಗಿತ್ತು. ಹಿಂದೆ ಸಾಲೆತ್ತೂರು ಪೇಟೆಯಲ್ಲಿ ಸುತ್ತಮುತ್ತಲಿನಲ್ಲಿ ಮೀನು ಮಾರಾಟ ಮಾಡಲಾಗುತ್ತಿತ್ತು. ಹೊಸ ಮಾರುಕಟ್ಟೆ ನಿರ್ಮಾಣಗೊಂಡ ಬಳಿಕ ಸಾಲೆತ್ತೂರು ಮೈದಾನ ಬಾಪಕುಂಞಿ ಅಂಗಡಿ ಪ್ರದೇಶ ಮತ್ತು ಸರ್ವೋದಯ ಶಾಲೆ ವರೆಗಿನ ಪ್ರದೇಶದಲ್ಲಿ, ರಸ್ತೆಯ ಬದಿಗಳಲ್ಲಿ ತಳ್ಳುಗಾಡಿ, ಮೋಟರು ವಾಹನ, ಅಥವಾ ಬೇರೆ ಯಾವುದೇ ರೂಪದಲ್ಲಿ ಮೀನು ಮಾರಾಟ ಮಾಡದಂತೆ ನಿಷೇಧಿಸಿ ಆದೇಶ ಮಾಡಲಾಗಿತ್ತು.
ಕಳೆದ ಕೆಲವು ದಿನಗಳ ಹಿಂದೆ ಬಾಪಕುಂಞಿ ಅಂಗಡಿ ಬಳಿ ಹಸಿಮೀನು ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಗಮಿಸಿ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮೀನು ವ್ಯಾಪಾರಿಗಳ ಬೆಂಬಲಿತರು ಗ್ರಾಮ ಪಂಚಾಯತ್‍ಗೆ ಆಗಮಿಸಿ ದ್ದಾರೆ. ಕೊಳ್ನಾಡು ಗ್ರಾಮ ಪಂಚಾಯತ್ ಮೀನಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಳಿಕ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಿಗೀ ಬಂದೋ ಬಸ್ತ್ ಏರ್ಪಡಿಸಿದ್ದಾರೆ. ಬಳಿಕ ಇತ್ತಂಡದ ನಡುವೆ ಮಾತುಕತೆ ವಿಫಲಗೊಂಡಿದ್ದರಿಂದ ವಾಹನ ಹಾಗೂ ಮೀನು ಬಾಕ್ಸ್ ಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಬೀದಿ ಬದಿ ವ್ಯಾಪಾರ ತಪ್ಪಿಸುವ ಹಾಗೂ ನೈರ್ಮುಲ್ಯ ಕಾಪಾಡುವ, ಪಂಚಾಯತ್‍ನ ಆದಾಯ ಹೆಚ್ಚಿಸುವ ಉದ್ದೇಶದಿಂದ ಮೀನು ಮಾರುಕಟ್ಟೆ ನಿರ್ಮಿಸಲಾಗಿತ್ತು. ನಿಷೇಧಿತ ಪ್ರದೇಶ ಎಂದು ನಾಮಫಲಕ ಅಳವಡಿಸಲಾಗಿದೆ. ಹಲವು ಮಂದಿ ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಒಬ್ಬರು ಮಾತ್ರ ಪೇಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿಯೇ ಮೀನು ಮಾರಾಟ ಮಾಡುವಂತೆ ಹಲವು ಬಾರಿ ವಿನಂತಿಸಲಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೂಡ ನೀಡಲಾಗಿತ್ತು. ಇದೀಗ ಗ್ರಾಮ ಪಂಚಾಯತ್ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಮಾರುಕಟ್ಟೆ ನಿರ್ಮಾಣ ಮಾಡಬಾರದೆಂದು ನ್ಯಾಯಾಲಯಕ್ಕೆ ಹೋಗಿ ವಿಫಲಗೊಂಡವರು ಇದೀಗ ಈ ರೀತಿಯಲ್ಲಿ ಕುತಂತ್ರ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.







