ಬಿಷಪ್ ಮುಳಕ್ಕಲ್ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ನನ್‌ಗೆ ಮುತ್ತಿಗೆ
ಮೃತ ಫಾದರ್ ಅಂತ್ಯಸಂಸ್ಕಾರದಲ್ಲಿ ನಡೆದ ಘಟನೆ

ಅಲಪ್ಪುಳ,ಅ.25: ನನ್ ಮೇಲೆ ಅತ್ಯಾಚಾರವೆಸಗಿದ ಆರೋಪವನ್ನು ಎದುರಿಸುತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಭಗಿನಿ ಅನುಪಮಾ ಅವರು ಮೃತ ಫಾದರ್ ಕುರಿಯಾಕೋಸ್ ಕಟ್ಟುಥರಾ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದಾಗ ಕೆಲವರು ಅವರನ್ನು ಪ್ರಶ್ನೆಗಳನ್ನು ಕೇಳಿ ಪೀಡಿಸಿ ಅಲ್ಲಿಂದ ಹೊರಬ್ಬಿದ ಘಟನೆ ಗುರುವಾರ ಇಲ್ಲಿ ನಡೆದಿದೆ.
ಕುರಿಯಾಕೋಸ್ ಅವರು ಮುಳಕ್ಕಲ್ ವಿರುದ್ಧ ಹೇಳಿಕೆ ನೀಡಿದ್ದು,ಮೂರು ದಿನಗಳ ಹಿಂದೆ ಜಲಂಧರ್ ಸಮೀಪದ ದಸುಯಾ ಎಂಬಲ್ಲಿ ನಿಗೂಢ ಸಾವನ್ನಪ್ಪಿದ್ದರು. ಬುಧವಾರ ಅವರ ಶವವನ್ನು ಕೇರಳಕ್ಕೆ ತರಲಾಗಿತ್ತು.
ಅಲಪ್ಪುಳ ಬಳಿಯ ಪಳ್ಳಿಪುರಂ ಚರ್ಚ್‌ನ ಸಿಮೆಟ್ರಿಯಲ್ಲಿ ಅವರ ಅಂತ್ಯಸಂಸ್ಕಾರದ ವೇಳೆ ಅನುಪಮಾರ ಉಪಸ್ಥಿತಿಯನ್ನು ಪ್ರಶ್ನಿಸಿದ ಗುಂಪು ಅವರನ್ನ ಹೊರಗೆ ಕಳುಹಿಸಿದೆ.
“ಪ್ರತಿಭಟನೆಯಿಂದ ನನಗೆ ನೋವಾಗಿದೆ. ನಾನು ಇದೇ ಸ್ಥಳದವಳು. ಹಲವಾರು ವರ್ಷಗಳಿಂದ ಕುರಿಯಾಕೋಸ್‌ರನ್ನು ಬಲ್ಲೆ. ಅವರು ನನ್ನನ್ನು ಮಗಳಂತೆ ನೋಡಿಕೊಂಡಿದ್ದರು. ನಾವೆಲ್ಲ ಸತ್ಯದ ಬೆಂಬಲಕ್ಕೆ ನಿಂತಿದ್ದೇವೆ,ಅಷ್ಟೇ” ಎಂದು ಅನುಪಮಾ ಹೇಳಿದರು.







