ದೇವಧರ್ ಟ್ರೋಫಿ: ಭಾರತ ‘ಸಿ’ ಫೈನಲ್ ಗೆ ಪ್ರವೇಶ
ಶುಭ್‌ಮನ್ ಗಿಲ್ ಅಜೇಯ ಶತಕ

ಹೊಸದಿಲ್ಲಿ, ಅ.25: ಸಮಯೋಚಿತ ಶತಕ ಸಿಡಿಸಿದ ಶುಭ್‌ಮನ್ ಗಿಲ್ ಸಹಾಯದಿಂದ ಭಾರತ ‘ಸಿ’ ತಂಡ ಭಾರತ ‘ಎ’ ತಂಡದ ವಿರುದ್ಧ ಆರು ವಿಕೆಟ್‌ಗಳ ಅಂತರದಿಂದ ಸುಲಭ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ದೇವಧರ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ.
ಇಲ್ಲಿ ಗುರುವಾರ ನಡೆದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಮೂವರು ಆಯ್ಕೆಗಾರರ ಎದುರಿನಲ್ಲೇ ತನ್ನ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಿದ ಅಂಡರ್-19 ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಗಿಲ್ 111 ಎಸೆತಗಳಲ್ಲಿ ಔಟಾಗದೆ 106 ರನ್(8 ಬೌಂಡರಿ,3 ಸಿಕ್ಸರ್)ಗಳಿಸಿದರು. ಈಗಾಗಲೇ ಟೀಮ್ ಇಂಡಿಯಾ ಪ್ರವೇಶಿಸಿರುವ ಅಂಡರ್-19 ನಾಯಕ ಪೃಥ್ವಿ ಶಾ ಹೆಜ್ಜೆ ಯನ್ನು ಹಿಂಬಾಲಿಸಿದರು.
ಗೆಲ್ಲಲು 294 ರನ್ ಗುರಿ ಪಡೆದಿದ್ದ ಭಾರತ ‘ಸಿ’ ತಂಡ 85 ರನ್‌ಗೆ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ ಇಶಾನ್ ಕಿಶನ್(69,60 ಎಸೆತ) ಹಾಗೂ ಸೂರ್ಯಕುಮಾರ್ ಯಾದವ್(ಔಟಾಗದೆ 56,36 ಎಸೆತ)ಬೆಂಬಲದೊಂದಿಗೆ ಇನಿಂಗ್ಸ್ ಆಧರಿಸಿದ ಗಿಲ್ ಭಾರತ ‘ಸಿ’ ತಂಡ 47 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿ ಗೆಲುವಿನ ದಡ ಸೇರಲು ನೆರವಾದರು.
ಭಾರತ ‘ಸಿ’ ನಾಯಕ ಅಜಿಂಕ್ಯ ರಹಾನೆ(14,25 ಎಸೆತ) ಹಾಗೂ ಅಭಿಮನ್ಯು ಮಿಥುನ್(37,40 ಎಸೆತ)ನಿಧಾನಗತಿಯ ಆರಂಭ ನೀಡಿದರು. ಕಿಶನ್‌ರೊಂದಿಗೆ 4ನೇ ವಿಕೆಟ್‌ಗೆ 121 ರನ್ ಜೊತೆಯಾಟ ಹಾಗೂ ಯಾದವ್‌ರೊಂದಿಗೆ 5ನೇ ವಿಕೆಟ್‌ಗೆ ಅಜೇಯ 90 ರನ್ ಜೊತೆಯಾಟ ನಡೆಸಿದ ಗಿಲ್ ಭಾರತ ‘ಸಿ’ ತಂಡಕ್ಕೆ 18 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು.
ಭಾರತ ‘ಸಿ’ ತಂಡ ಶನಿವಾರ ದಿಲ್ಲಿಯಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಇಂಡಿಯಾ ‘ಬಿ’ ತಂಡವನ್ನು ಎದುರಿಸಲಿದೆ.
► ಭಾರತ ‘ಎ’ 293/6: ಇದಕ್ಕೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ‘ಎ’ ತಂಡ ಅಗ್ರ ಕ್ರಮಾಂಕದ ಮೂವರು ಆಟಗಾರರಾದ ಅಭಿಮನ್ಯು ಈಶ್ವರನ್(69,103 ಎಸೆತ), ಅಮೋಲ್‌ಪ್ರೀತ್ ಸಿಂಗ್(59,56 ಎಸೆತ) ಹಾಗೂ ನಿತೀಶ್ ರಾಣಾ(68,76 ಎಸೆತ) ಅರ್ಧಶತಕಗಳ ಕೊಡುಗೆ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 293 ರನ್ ಗಳಿಸಿತು. ಆಲ್‌ರೌಂಡರ್ ಕೇದಾರ್ ಜಾಧವ್ ಡೆತ್ ಓವರ್‌ನಲ್ಲಿ 25 ಎಸೆತಗಳಲ್ಲಿ ಔಟಾಗದೆ 41 ರನ್ ಗಳಿಸಿ ತಂಡದ ಮೊತ್ತವನ್ನು 293ಕ್ಕೆ ತಲುಪಿಸಿದರು.
ಈಶ್ವರನ್ ಹಾಗೂ ಸಿಂಗ್ ಮೊದಲ ವಿಕೆಟ್‌ಗೆ 99 ರನ್ ಜೊತೆಯಾಟ ನಡೆಸಿ ಭಾರತ ‘ಎ’ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಸಿಂಗ್ ಔಟಾದ ಬಳಿಕ ನಿತೀಶ್ ರಾಣಾ ಅವರೊಂದಿಗೆ ಜೊತೆಯಾದ ಈಶ್ವರನ್ 2ನೇ ವಿಕೆಟ್‌ಗೆ 76 ರನ್ ಸೇರಿಸಿದರು. ದಿಲ್ಲಿ ಮೂಲದ ರಾಣಾ ಕೋಟ್ಲಾ ಸ್ಟೇಡಿಯಂ ಪಿಚ್‌ನ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದ್ದು ಅವರು 76 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್‌ಗಳ ಸಹಿತ 68 ರನ್ ಗಳಿಸಿದರು.







