ಚಿಕ್ಕಮಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆರೋಗ್ಯ ಇಲಾಖೆ ನೌಕರರ ಧರಣಿ

ಚಿಕ್ಕಮಗಳೂರು, ಅ.25: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ವೇದಿಕೆ ವತಿಯಿಂದ ಗುರುವಾರ ನಗರದ ಆಜಾದ್ ವೃತ್ತದಲ್ಲಿ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಆಯುಷ್‍ನ ಡಾ.ಶ್ರೀನಿವಾಸ್ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಮಿಷನ್ ಮೂಲಕ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಗುತ್ತಿಗೆ ಆಧಾರದಲ್ಲಿ ದೇಶಾದ್ಯಂತ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದ್ದರೂ ಅವರಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳನ್ನು ನೀಡದೇ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿರುವುದು ಖಂಡನೀಯ ಎಂದರು.
ಆರೋಗ್ಯ ಇಲಾಖೆಯಲ್ಲಿ ಖಾಯಂ ನೌಕರರಿಗಿಂತ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಹೆಚ್ಚಿದ್ದು ಖಾಯಂ ನೌಕರರಿಗಿಂತ ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸಿದರೂ ಯಾವುದೇ ಸೇವಾ ಭದ್ರತೆ ಇರುವುದಿಲ್ಲ, ವೇತನ ತಾರತಮ್ಯ ಸಮಸ್ಯೆ ಪರಿಹರಿಸಿಲ್ಲ ಇಂತಹ ಸಂಕಷ್ಟದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಹಕ್ಕೊತ್ತಾಯಗಳು
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು, ರಾಜ್ಯ ಸರ್ಕಾರದ ಆರೋಗ್ಯ ಕ್ಷೇತ್ರದ ಬಜೆಟ್‍ನ್ನು ಶೇ.15ರಷ್ಟಕ್ಕೆ ಏರಿಸಬೇಕು, ಅಗತ್ಯವಿರುವ ಆರ್ಥಿಕ ನೆರವನ್ನು ನೀಡಬೇಕು. ಆರೋಗ್ಯ ಇಲಾಖೆಯ ಎಲ್ಲಾ ಗುತ್ತಿಗೆ ನೌಕರರಿಗೆ ನಿವೃತ್ತಿ ವಯಸ್ಸಿನವರೆಗೂ ಸೇವಾಭದ್ರತೆ ನೀಡುವುದರೊಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ವೇತನ ಭತ್ಯೆ ಮತ್ತು ವೇತನ ಶ್ರೇಣಿಯನ್ನು ನೀಡಲು ಹರಿಯಾಣ ಮಾದರಿಯಲ್ಲಿ ನಿಯಮ ರೂಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸೇವಾಭದ್ರತೆ ಒದಗಿಸುವುದು, ನೌಕರರನ್ನು ಖಾಯಂಗೊಳಿಸಬೇಕು, ಹೊರಗುತ್ತಿಗೆಯ ಎಲ್ಲಾ ನೌಕರರಿಗೆ ಮಧ್ಯವರ್ತಿತನವಿಲ್ಲದೇ ನೇರವಾಗಿ ಇಲಾಖೆಯಿಂದ ವೇತನ ಪಾವತಿಸುವುದು, ಜ್ಯೋತಿ ಸಂಜೀವಿನಿ ಯೋಜನೆಯನ್ನು ಗುತ್ತಿಗೆ ನೌಕರರಿಗೆ ನೀಡುವುದು, ಖಾಯಂ ನೇಮಕಾತಿಯ ಕಾರಣ ಹೇಳಿ ಸ್ಥಳ ಬದಲಾವಣೆ ಮಾಡಬಾರದು, ಸೇವೆಯಿಂದ ವಿನಃ ಕಾರಣ ತೆಗೆದು ಹಾಕಿರುವ ನೌಕರರನ್ನು ಮರುನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ನೌಕರರ ಮೇಲಿನ ಶೋಷಣೆ ತಡೆಗಟ್ಟಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರಕ್ಷಣಾ ಸಮಿತಿ ರಚಿಸಿ ಅದರಲ್ಲಿ ಗುತ್ತಿಗೆ ನೌಕರರ ವೇದಿಕೆಯ ಇಬ್ಬರು ಪ್ರತಿನಿಧಿಗಳನ್ನು ನೇಮಿಸುವುದು, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಹಾಗೂ ಡಿ.ಗ್ರೂಪ್ ನೌಕರರಿಗೆ ವಿಶೇಷ ಸೇವಾ ಭತ್ಯೆ ನೀಡುವುದು, ಸರ್ಕಾರಿ ಆರೋಗ್ಯ ವ್ಯವಸ್ಥೆಯಡಿಯಲ್ಲೇ ಎಲ್ಲಾ ಬಗೆಯ ಸಮಸ್ಯೆಗಳಿಗೆ ಸಂಪೂರ್ಣ ಗುಣಮಟ್ಟದ ಚಿಕಿತ್ಸೆ ದೊರೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಧರಣಿಯಲ್ಲಿ ಸಂಘಟನೆಯ ಅಧ್ಯಕ್ಷೆ ಬಿ.ಸಿ ಜ್ಯೋತಿ, ಮುಖಂಡರಾದ ಜೀವರಾಜ್, ಅಂಜಲಿ, ರಮೇಶ್, ಕುಮಾರ್, ಡಾ.ಶ್ವೇತ ಸೇರಿದಂತೆ ನೂರಾರು ಮಂದಿ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ಭಾಗವಹಿಸಿದ್ದರು.







