ಕೆಲಸ ಕಾರ್ಯಗಳು ವಿಶ್ಲೇಷಣೆಗೊಳಗಾಗಬೇಕೇ ಹೊರತು, ನನ್ನ ಆರೋಗ್ಯ, ವೈಯಕ್ತಿಕ ವಿಷಯಗಳಲ್ಲ: ಕುಮಾರಸ್ವಾಮಿ

ಮಂಡ್ಯ, ಅ.26: ಅಭಿವೃದ್ಧಿ ಬಿಟ್ಟು ರಾಜಕಾರಣವನ್ನಷ್ಟೇ ಮಾಡುತ್ತಿರುವ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದಾಗಿ ದೃಶ್ಯ ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಬಾರಿ ಮಂಡ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಮಾಧ್ಯಮಗಳ ಕೆಲವರ ಧೋರಣೆಯನ್ನು ಕಟುವಾಗಿ ಟೀಕಿಸಿದ್ದ ಅವರು, ನನ್ನ ಕೆಲಸ ಕಾರ್ಯಗಳು ವಿಶ್ಲೇಷಣೆಗೊಳಗಾಗ ಬೇಕೇ ಹೊರತು, ನನ್ನ ಆರೋಗ್ಯ, ವೈಯಕ್ತಿಕ ವಿಷಯಗಳಲ್ಲ. ಈ ಬಗ್ಗೆ ದೃಶ್ಯ ಮಾಧ್ಯಮಗಳ ಕೆಲವರು ಅನಗತ್ಯ ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು.
ನಾನು ಕೈಗೊಳ್ಳುವ ಕೆಲಸಕಾರ್ಯಗಳಲ್ಲಿ ಲೋಪವಿದ್ದರೆ ತಿಳಿಸಲಿ. ಜನರ ಸಮಸ್ಯೆ ಬಗ್ಗೆ ಗಮನ ಸೆಳೆಯಲಿ. ಅದನ್ನು ಬಿಟ್ಟು ಜನರನ್ನು ತಪ್ಪುದಾರಿಗೆ ಎಳೆಯಬೇಡಿ, ನನ್ನ ಆರೋಗ್ಯದ ಜತೆ ಚೆಲ್ಲಾಟವಾಡಬೇಡಿ ಎಂದು ಅವರು ಹೇಳಿದರು.
ಹಣಕ್ಕಾಗಿ ಅಧಿಕಾರದಲ್ಲಿ ಕೂತಿಲ್ಲ. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವಂತಹ ಭಾವನಾತ್ಮಕ ಜೀವಿ ನಾನು, ಭಂಡ ರಾಜಕಾರಣಿಯಲ್ಲ. ಜನರ ಹೃದಯದಲ್ಲಿ ಕೂರಲು ಹೋರಾಟ ಮಾಡುತ್ತಿದ್ದೇನೆ. ಇದನ್ನು ಮಾಧ್ಯಮಗಳು ಅರ್ಥಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.







