ಮುಡಿಪು: ಲಾರಿ- ಸ್ಕೂಟರ್ ಢಿಕ್ಕಿ; ಮಹಿಳೆ ಮೃತ್ಯು, ಸವಾರನಿಗೆ ಗಂಭೀರ ಗಾಯ

ಕೊಣಾಜೆ, ಅ. 26: ಲಾರಿ ಮತ್ತು ಆಕ್ಟೀವ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಆಕೆಯ ಪತಿ ಗಂಭೀರ ಗಾಯಗೊಂಡಿರುವ ಘಟನೆ ಮುಡಿಪು ಮಿತ್ತಕೋಡಿ ಸಮೀಪ ಶುಕ್ರವಾರ ಸಂಜೆ ಸಂಭವಿಸಿದ್ದು, ಉದ್ರಿಕ್ತ ಗುಂಪು ಘಟನೆಗೆ ಕಾರಣವಾದ ಲಾರಿಯ ಗಾಜಿಗೆ ಕಲ್ಲು ತೂರಾಟ ನಡೆಸಿದೆ.
ಪಾನೇಲ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ಝುಬೈದಾ (35) ಮೃತರು ಎಂದು ಗುರುತಿಸಲಾಗಿದೆ. ಅವರ ಪತಿ ಇಸ್ಮಾಯಿಲ್ ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಾನೇಲ ಕಡೆಯಿಂದ ಮುಡಿಪಿಗೆ ಆಕ್ಟಿವಾ ಸ್ಕೂಟರಿನಲ್ಲಿ ತೆರಳುತ್ತಿದ್ದ ದಂಪತಿಗೆ ಮುಡಿಪು ಕಡೆಯಿಂದ ಮೆಲ್ಕಾರ್ ಕಡೆಗೆ ಕಲ್ಲು ಸಾಗಿಸುತ್ತಿದ್ದ ಲಾರಿ ಎದುರಿನಿಂದ ಬಂದು ಢಿಕ್ಕಿ ಹೊಡೆದಿದ್ದು, ಪರಿಣಾಮ ಲಾರಿಯ ಹಿಂಬದಿ ಚಕ್ರದಡಿ ಮಹಿಳೆ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಅವರು ಮೃತಪಟ್ಟರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





