ಕೇಂದ್ರ ಸರಕಾರದಿಂದ ರೈತರಿಗೆ ನಯಾಪೈಸೆ ಉಪಯೋಗವಿಲ್ಲ: ಸಂಸದ ಮುದ್ದುಹನುಮೇಗೌಡ
ಮಂಡ್ಯ, ಅ.26: ರೈತರಿಗೆ ನಯಾಪೈಸೆ ಉಪಯೋಗವಿಲ್ಲದ ಸರಕಾರವೆಂದು ಕೇಂದ್ರದ ಬಿಜೆಪಿ ವಿರುದ್ಧ ತುಮಕೂರು ಸಂಸದ ಮುದ್ದುಹನುಮೇಗೌಡ ತೀವ್ರ ವಾಗ್ದಾಳಿ ನಡೆಸಿದ್ದು, ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತದಾರರಿಗೆ ಕರೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರಕಾರದಿಂದ ರೈತರಿಗೆ ಯಾವುದೇ ಯೋಜನೆಗಳಿಲ್ಲವೆಂದು ಆರೋಪಿಸಿದರು.
ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ರೈತರ 8 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿತ್ತು. ಕುಮಾರಸ್ವಾಮಿ ಸರಕಾರ 45 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ಮನಮೋಹನ್‍ಸಿಂಣ್ ಅವರ ಸರಕಾರ ದೇಶದ ರೈತರ 75 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿತ್ತು ಎಂದು ಅವರು ಹೇಳಿದರು.
ರೈತರ ಅನುಕೂಲಕ್ಕೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಗೊಳಿಸಲಾಗಿದೆಯೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರಕಾರದಲ್ಲೇ ಜಾರಿಯಲ್ಲಿದ್ದ ಬೆಳೆ ವಿಮೆ ಯೋಜನೆಗೆ ಬೇರೆ ಹೆಸರು ನೀಡಲಾಗಿದೆ ಅಷ್ಟೆ ಎಂದು ಅವರು ಟೀಕಿಸಿದರು.
ರೈತರ ಸಾಲಮನ್ನಾ ಮಾಡಿದರೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಆದರೆ, ಇವರ ಸರಕಾರಕ್ಕೆ ಚಳ್ಳೆಹಣ್ಣು ತಿನ್ನಿಸಿ ಕೆಲವರು ಬ್ಯಾಂಕ್‍ಗಳ ಕೋಟ್ಯಂತರ ಹಣ ತೆಗೆದುಕೊಂಡು ವಿದೇಶಕ್ಕೆ ಪರಾರಿಯಾದರು ಎಂದು ಅವರು ವ್ಯಂಗ್ಯವಾಡಿದರು.
ರಾಜ್ಯದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ಸಮಯ 2019ರ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷದ ವಿರುದ್ಧ ಜಾತ್ಯತೀತ ರಾಜಕೀಯ ಶಕ್ತಿಗಳ ಧ್ರುವೀಕರಣಕ್ಕೆ ನಾಂದಿಯಾಯಿತು. ಈ ಉಪಚುನಾವಣೆ ಫಲಿತಾಂಶ ಸಮ್ಮಿಶ್ರ ಸರಕಾರ ಪರ ಬರುವ ಮೂಲಕ ಈ ಧ್ರುವೀಕರಣಕ್ಕೆ ಬುನಾದಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.







