ಮರಳುಗಾರಿಕೆ: ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ

ಉಡುಪಿ, ಅ.26: ಉಡುಪಿ ಜಿಲ್ಲಾ ಮರಳು ಹೋರಾಟ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮರಳುಗಾರಿಕೆ ಪ್ರಾರಂಭಿಸುವವರೆಗೆ ಜಿಲ್ಲಾಡಳಿತದ ವಿರುದ್ಧ ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯು ಎರಡನೆ ದಿನವಾದ ಶುಕ್ರವಾರವೂ ಮುಂದುವರಿದಿದೆ.
ಧರಣಿ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕಾ ಮಾತ ನಾಡಿ, ಮರಳು ಸಮಸ್ಯೆಯಿಂದ ಇಂದು ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಅಧಿಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಮರಳಿನ ಸಮಸ್ಯೆಯಿಂದ ಎಲ್ಲ ಉದ್ಯಮಗಳು ಅತಂತ್ರಗೊಂಡಿವೆ. ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.
ಎರಡನೆ ದಿನದ ಧರಣಿಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಉಡುಪಿ ಜಿಲ್ಲಾ ಬಿಲ್ಡರ್ಸ್ ಅಸೋಸಿಯೇಶನ್ ಅಧ್ಯಕ್ಷ ಜೆರ್ರಿ ಡಯಾಸ್, ದೋಣಿ ಮಾಲಕರ ಸಂಘದ ಅಧ್ಯಕ್ಷ ಸುಧಾಕರ್ ಪೂಜಾರಿ, ಉಡುಪಿ ಇಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ಗೋಪಾಲ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಜಿಪಂ ಸದಸ್ಯರಾದ ರೇಶ್ಮಾ ಉದಯ ಶೆಟ್ಟಿ, ಶಿಲ್ಪಾ ಸುವರ್ಣ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಶ್ಯಾಮಲಾ ಕುಂದರ್, ತುಳುನಾಡ ರಕ್ಷಣಾ ವೇದಿಕೆಯ ಐಕಳಬಾವ ಚಿತ್ತರಂಜನ್‌ದಾಸ್ ಶೆಟ್ಟಿ, ಸೋಮಶೇಖರ್ ಭಟ್, ಪಿಡಬ್ಲುಡಿ ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ಅಲೆವೂರು ಶ್ರೀಧರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅಲ್ಲೆ ಊಟ, ಅಲ್ಲೇ ನಿದ್ರೆ !
ಅಹೋರಾತ್ರಿ ಧರಣಿಯಲ್ಲಿ ಶಾಸಕ ಕೆ.ರಘುಪತಿ ಭಟ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಧರಣಿಗಾಗಿ ನಿರ್ಮಿಸಿರುವ ಪೆಂಡಲ್‌ನಲ್ಲಿಯೇ ರಾತ್ರಿಯ ಊಟ ಮುಗಿಸಿ ಅಲ್ಲೇ ಮಲಗಿದರು.
ನೂರಾರು ಸಂಖ್ಯೆಯಲ್ಲಿದ್ದ ವಿವಿಧ ಸಂಘಟನೆಯವರು ರಾತ್ರಿ ಇಡೀ ಧರಣಿ ಯಲ್ಲಿ ಪಾಲ್ಗೊಂಡರು. ರಘುಪತಿ ಭಟ್ ಸಹಿತ ಎಲ್ಲರು ಅಲ್ಲೇ ಬೆಡ್ ಹಾಕಿ ಮಲಗಿದರು. ಧರಣಿನಿರತರಿಗೆ ರಾತ್ರಿ ಊಟ, ಬೆಳಗ್ಗೆ ಉಪಹಾರದ ವ್ಯವಸ್ಥೆ ಯನ್ನು ಮಾಡಲಾಗಿತ್ತು. ಇಂದು ಮಧ್ಯಾಹ್ನ 500 ಮಂದಿಗೆ ಬೇಕಾಗುವಷ್ಟು ಗಂಜಿ ಹಾಗೂ ಹುರುಳಿ ಚಟ್ನಿಯನ್ನು ತಯಾರಿಸಲಾಗಿತ್ತು.







