ಅ.29ಕ್ಕೆ ಮರಳು ದಿಬ್ಬ ಗುರುತಿಸುವ ಬೆಥಮೆಟಿಕಲ್ ಸರ್ವೆ ಪೂರ್ಣ: ಜಿಲ್ಲಾಧಿಕಾರಿ ಪ್ರಿಯಾಂಕ
ಉಡುಪಿ, ಅ.26: ಸುರತ್ಕಲ್ ಎನ್‌ಐಟಿಕೆ ತಂಡ ಉಡುಪಿಯ ಉದ್ಯಾವರ ಪಾಪನಾಶಿನಿ, ಸೀತಾನದಿ ಹಾಗೂ ಸುವರ್ಣ ನದಿಗಳಲ್ಲಿ ನಡೆಸುತ್ತಿರುವ ಮರಳು ದಿಬ್ಬಗಳನ್ನು ಗುರುತಿಸುವ ಬೆಥಮೆಟಿಕಲ್ ಸರ್ವೆ ಕಾರ್ಯವು ಅ.29ರಂದು ಪೂರ್ಣಗೊಳ್ಳಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಶುಕ್ರವಾರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಿರುವ ಐದು ಮರಳ ದಿಬ್ಬಗಳ ತೆರವಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅದರ ಅವಧಿ ಅ.27ಕ್ಕೆ ಕೊನೆಯಾಗಲಿದೆ. ಆದರೆ ಇದಕ್ಕೆ ಈವರೆಗೆ ಕೇವಲ ಐದು ಅರ್ಜಿಗಳು ಮಾತ್ರ ಬಂದಿರುವುದರಿಂದ ಅದರ ಅವಧಿಯನ್ನು ಮತ್ತೆ ವಿಸ್ತರಿಸುವ ಬಗ್ಗೆ ಯೋಚಿಸ ಲಾಗುವುದು ಎಂದು ಅವರು ತಿಳಿಸಿದರು.
ಕುಂದಾಪುರ ಹಾಗೂ ಬೈಂದೂರಿನಲ್ಲಿ ಮರಳು ತೆಗೆಯಲು ಅವಕಾಶ ಇಲ್ಲದಿ ರುವುದರಿಂದ ನಮಗೆ ದೊಡ್ಡ ಹೊಡೆತ ಬಿದ್ದಿದೆ. ಇಲ್ಲಿ ಸಿಆರ್‌ಝೆಡ್ ಕಾನೂನು ಸರಳೀಕರಣಕ್ಕೆ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮರಳಿನ ವಿಚಾರದಲ್ಲಿ ನನಗೆ ಕೇವಲ ಕಾನೂನು ಅನುಷ್ಠಾನಗೊಳಿಸುವ ಒತ್ತಡ ಇದೆಯೇ ಹೊರತು ಯಾವುದೇ ರಾಜಕೀಯ ಒತ್ತಡಗಳಿಲ್ಲ. ಈ ಬಗ್ಗೆ ಈಗಲೂ ಹಸಿರು ಪೀಠದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ತುಂಬಾ ಜಾಗ್ರತೆಯಿಂದ ಕೆಲಸ ಮಾಡಬೇಕಾಗುತ್ತದೆ. ಕಳೆದ ಬಾರಿಯ ಸಮಸ್ಯೆ ಈ ಬಾರಿ ಎದುರಾಗಬಾರದು ಎಂದು ಅವರು ಹೇಳಿದರು.
2011ರ ಹಿಂದಿನಿಂದ ಮರಳು ದಿಬ್ಬ ತೆರವುಗೊಳಿಸುತ್ತಿದ್ದವರಿಗೆ ಮಾತ್ರ ಪರ ವಾನಿಗೆ ನೀಡುವಂತೆ ಸರಕಾರ ಆದೇಶ ನೀಡಿದ್ದು, ಅದರ ನಂತರದವರಿಗೆ ಪರಾ ವನಿಗೆ ನೀಡುವ ಕುರಿತು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಮಾಹಿತಿ ಪಡೆದು ನಿರ್ದೇಶನ ನೀಡಲಾಗುವುದಾಗಿ ತಿಳಿಸಿದೆ. ಆದುದರಿಂದ ಈ ಬಗ್ಗೆ ನಾವು ಏನನ್ನು ಕೂಡ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಎಲ್ಲವೂ ಸರಕಾರದ ಮಟ್ಟದಲ್ಲಿಯೇ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ಪಷ್ಟಪಡಿಸಿದರು.
ಸರಕಾರದ ಆದೇಶದ ಹಿನ್ನೆಲೆಯಲ್ಲಿ 2011ರ ಹಿಂದಿನಿಂದ ಮರಳು ದಿಬ್ಬ ತೆರವುಗೊಳಿಸುತ್ತಿದ್ದವರು ತಮ್ಮಲ್ಲಿ ದಾಖಲೆಗಳಿದ್ದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಲ್ಲಿಸಬಹುದಾಗಿದೆ. ಅದೇ ರೀತಿ 2001ರ ಹಿಂದೆ ಕೂಡ ಲೀಸ್‌ನಲ್ಲಿ ಮರಳು ದಿಬ್ಬ ತೆರವು ಮಾಡುತ್ತಿದ್ದವರು ಕೂಡ ದಾಖಲೆಗಳನ್ನು ನೀಡಬಹು ದಾಗಿದೆ ಎಂದು ಅವರು ಹೇಳಿದರು.







