ಜಿಲ್ಲಾಡಳಿತದಿಂದ ಮರಳುಗಾರಿಕೆ ತಡೆಯುವ ಹುನ್ನಾರ: ರಘುಪತಿ ಭಟ್

ಉಡುಪಿ, ಅ.26: 2011ರ ಹಿಂದಿನಿಂದ ಮರಳು ದಿಬ್ಬ ತೆರವುಗೊಳಿಸುತ್ತಿ ದ್ದವರಿಗೆ ಮಾತ್ರ ಪರವಾನಿಗೆ ನೀಡುವ ಮೊಂಡುವಾದವನ್ನು ಜಿಲ್ಲಾಧಿಕಾರಿಗಳು ಮಂಡಿಸುತ್ತಿದ್ದಾರೆ. ಇದರ ಹಿಂದೆ ಉದ್ದೇಶಪೂರ್ವಕವಾಗಿ ಮರಳುಗಾರಿಕೆಯನ್ನು ತಡೆಯುವ ಹುನ್ನಾರ ನಡೆಯುತ್ತಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಧರಣಿಯ ಸ್ಥಳ ದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಆಗಿನ ಜಿಲ್ಲಾಧಿಕಾರಿ ಆದೇಶದಂತೆ 171 ಮಂದಿ ಪರವಾನಿಗೆದಾರರು ನೊಂದಾಣಿ ಮಾಡಿಕೊಂಡಿದ್ದರು. ಜಿಲ್ಲಾಡಳಿತ ಹಸಿರು ಪೀಠಕ್ಕೆ ಸಲ್ಲಿಸಿರುವ ಅಫಿದವಿತ್ ನಲ್ಲಿಯೂ ಈ 171 ಮಂದಿಯ ಬಗ್ಗೆಯೂ ಮಾಹಿತಿ ನೀಡ ಲಾಗಿದೆ. ಇದೀಗ ಇವರನ್ನು ಕೈಬಿಟ್ಟು 2011ರ ಹಿಂದಿನವರಿಗೆ ಪರವಾನಿಗೆ ನೀಡುವ ವ್ಯವಸ್ಥೆ ಸರಿಯಲ್ಲ ಎಂದರು.
ಈ ರೀತಿ ಮಾಡುವುದರಿಂದ ಕೇವಲ 92 ಮಂದಿಗೆ ಮಾತ್ರ ಮರಳು ತೆಗೆಯಲು ಪರವಾನಿಗೆ ಸಿಗುತ್ತದೆ. ಪರಿಸರ ಸೂಕ್ಷ್ಮ ಪ್ರದೇಶವನ್ನು ಹೊರತು ಪಡಿಸಿ ಉಳಿದ ಎಲ್ಲ ಮರಳು ದಿಬ್ಬಗಳಿಗೆ ಅನುಮತಿಯನ್ನು ನೀಡಬೇಕು. ಇದರಿಂದ ಎಲ್ಲ 171 ಮಂದಿಗೂ ಮರಳು ತೆಗೆಯಲು ಅವಕಾಶ ಸಿಗುತ್ತದೆ ಎಂದು ಅವರು ಹೇಳಿದರು.
ನಾನ್‌ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಟೆಂಡರ್ ಕರೆಯುವುದರಿಂದ ಸಾಂಪ್ರಾ ದಾಯಿಕ ಮರಳುಗಾರಿಕೆ ನಡೆಸುತ್ತಿದ್ದ 109 ಪರವಾನಿಗೆದಾರರಿಗೆ ಅವಕಾಶ ಸಿಗಲ್ಲ. ಆದುದರಿಂದ ಈ ಟೆಂಡರ್ ವ್ಯವಸ್ಥೆಯನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು. ಧರಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಬರುವ ಮಾಹಿತಿ ಲಭಿಸಿದ್ದು, ಅವರಿಗಾಗಿ ಕಾಯುತ್ತಿ ದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜೆರ್ರಿ ಡಯಾಸ್, ಸುಧಾಕರ್ ಪೂಜಾರಿ, ಗೋಪಾಲ ಭಟ್, ಗುರುರಾಜ್ ಭಟ್, ಎಂ.ಜಿ. ನಾಗೇಂದ್ರ, ಅನ್ಸಾರ್ ಅಹ್ಮದ್, ಸತೀಶ್ ಮುಟ್ಲುಪಾಡಿ, ಅಲೆವೂರು ಶ್ರೀಧರ್ ಶೆಟ್ಟಿ, ಇಸ್ಮಾಯಿಲ್ ಉಪಸ್ಥಿತರಿದ್ದರು.







