ಮಳೆಹಾನಿ ಮಕ್ಕಂದೂರಿಗೆ ಅಮೆರಿಕಾ ಅಕ್ಕ ಸಂಸ್ಥೆಯ ಸಹಾಯಹಸ್ತ: ಶಾಲೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮಡಿಕೇರಿ, ಅ.26 : ಅಮೆರಿಕಾದಲ್ಲಿನ ಕನ್ನಡ ಕೂಟಗಳ 'ಅಕ್ಕ' ಸಂಸ್ಥೆಯ ವತಿಯಿಂದ ಕೊಡಗು ಜಿಲ್ಲೆಯ ಪ್ರಾಕೃತಿಕ ವಿಕೋಪ ಸಂತ್ರಸ್ಥ ವಿದ್ಯಾರ್ಥಿಗಳಿಗಾಗಿ 40 ಲಕ್ಷ ರೂ. ವೆಚ್ಚದಲ್ಲಿ ಉದ್ದೇಶಿತ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಕೊಡಗು ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಶಂಕುಸ್ಥಾಪನೆ ನೆರವೇರಿಸಿದರು.
ಮಡಿಕೇರಿ ಬಳಿಯ ಮಕ್ಕಂದೂರು ಗ್ರಾಮದಲ್ಲಿ ಅಕ್ಕ ವತಿಯಿಂದ ನಿರ್ಮಿಸಲಾಗುವ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವರು, ಕೊಡಗಿನ ಸಂಕಷ್ಟಕ್ಕೆ ಮನಮಿಡಿದು ಜಗತ್ತಿನೆಲ್ಲೆಡೆಯ ಜನತೆ ವಿವಿಧ ರೀತಿಯಲ್ಲಿ ನೆರವಾಗಿದ್ದಾರೆ. ಅಮೇರಿಕಾದಲ್ಲಿ ನೆಲಸಿರುವ ಕನ್ನಡಿಗರ ಕೂಟವು ಇದೀಗ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೊಡಗಿನ ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಮುಖ್ಯಮಂತ್ರಿಗಳು ಈಗಾಗಲೇ ಘೋಷಿಸಿರುವಂತೆ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ. ಕೊಡಗಿನ ಸರ್ವಾಂಗೀಣ ಪ್ರಗತಿಗೆ ಸರ್ಕಾರ ಬದ್ದವಾಗಿದೆ ಎಂದು ಹೇಳಿದ ಸಚಿವರು, ಕಾಫಿ ಬೆಳೆಗಾರರ ಸಮಸ್ಯೆ ಸಂಬಂಧಿತ ಈಗಾಗಲೇ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ. ಕೊಡಗಿನ ಸಂತ್ರಸ್ಥರ ನೆಮ್ಮದಿಯ ಜೀವನಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲಿಯೂ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಪ್ರಾರಂಭಿಕ ಹಂತದಲ್ಲಿ ವೇಗಗತಿಯಲ್ಲಿದ್ದ ಕೊಡಗಿನ ಪುನರ್ ನಿರ್ಮಾಣ ಕಾರ್ಯ ಇತ್ತೀಚಿನ ದಿನಗಳಲ್ಲಿ ನಿಧಾನಗತಿಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ನಿಟ್ಟಿನಲ್ಲಿ ಗಮನ ಹರಿಸಿ ಶೀಘ್ರಗತಿಯಲ್ಲಿ ಪ್ರಗತಿ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚಿಸಬೇಕು. ಕೊಡಗಿನಿಂದ ಹೊರ ಊರುಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಇನ್ನೂ ಸರ್ಕಾರದಿಂದ ಸೂಕ್ತ ಪರಿಹಾರದ ಹಣ ದೊರಕಿಲ್ಲ. ಸರ್ಕಾರ ಘೋಷಿಸಿರುವ ಮನೆ ಬಾಡಿಗೆ ಹಣವೂ ಲಭಿಸಿಲ್ಲ ಎಂದು ದೂರಿದರು.
ಅಕ್ಕ ಸಂಸ್ಥೆಯ ಅಧ್ಯಕ್ಷ ಶಿವಮೂರ್ತಿ ಕೀಲಾರ್ ಮಾತನಾಡಿ, ಮಕ್ಕಂದೂರು ಗ್ರಾಮದಲ್ಲಿ 4 ಕೊಠಡಿಗ, 1 ಸಭಾಂಗಣವನ್ನೂ ಹೊಂದಿರುವ ಸುಸಜ್ಜಿತ ಶಾಲಾ ಕಟ್ಟಡವನ್ನು ಜನವರಿಯೊಳಗಾಗಿ ನಿರ್ಮಿಸಲಾಗುತ್ತದೆ ಎಂದರು. ಅಕ್ಕ ಸಂಸ್ಥೆಯಿಂದ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ 1 ಕೋಟಿ ರೂ. ಹಣವನ್ನು ಸಂಚಾರಿ ಆರೋಗ್ಯ ಚಿಕಿತ್ಸಾ ಘಟಕಕ್ಕೆ ನೀಡಲಾಗಿದ್ದು, ಕೊಡಗಿನ ಜನತೆಯೂ ಈ ಸಂಚಾರಿ ವೈದ್ಯಕೀಯ ಘಟಕದ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಕೊಡಗು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್, ರಾಜ್ಯ ಆಹಾರ ಸರಬರಾಜು ಇಲಾಖೆಯ ಉಪಕಾರ್ಯದರ್ಶಿ ಕಾ.ರಾಮೇಶ್ವರಪ್ಪ, ಕೊಡಗು ಜಿಲ್ಲಾ ಶಿಕ್ಷಣಾಧಿಕಾರಿ ಮಚ್ಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಮಕ್ಕಂದೂರು ಗ್ರಾ.ಪಂ. ಅಧ್ಯಕ್ಷೆ ಕಾವೇರಮ್ಮ, ಜಿಲ್ಲಾ ಪಂಚಾಯತ್ ಸದಸ್ಯೆ ಪದ್ಮಾವತಿ, ನಾಪಂಡ ಕಾಳಪ್ಪ ಹಾಜರಿದ್ದರು.
ಮುಕ್ಕೋಡ್ಲುವಿನ ವ್ಯಾಲಿಡ್ಯೂ ತಂಡದಿಂದ ಕೊಡವ ಸಾಂಪ್ರದಾಯಿಕ ನೃತ್ಯ ಮತ್ತು ಮೈಸೂರಿನ ಇನಿಧನಿ ತಂಡದಿಂದ ಗೀತಾಗಾಯನ ಪ್ರಸ್ತುತಪಡಿಸಲಾಯಿತು.







