ಕಾನೂನು ಬಾಹಿರವಾಗಿ ವಕ್ಫ್‌ಬೋರ್ಡ್ ಕಾರ್ಯನಿರ್ವಹಣೆ: ರಹ್ಮಾನ್‌ಖಾನ್ ಆರೋಪ

ಬೆಂಗಳೂರು, ಅ.27: ರಾಜ್ಯ ವಕ್ಫ್ ಬೋರ್ಡ್ ಕಳೆದ ಎರಡು ವರ್ಷಗಳಿಂದ ಕಾನೂನು ಬಾಹಿರವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಆದರೂ, ಈ ಬಗ್ಗೆ ಯಾರೊಬ್ಬರೂ ಸರಕಾರವನ್ನು ಪ್ರಶ್ನಿಸುತ್ತಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್‌ಖಾನ್ ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ವಿಷನ್ ಕರ್ನಾಟಕ ಸಂಘಟನೆಯು ಆಯೋಜಿಸಿದ್ದ ‘ಜನತಾ ಕೀ ಅದಾಲತ್’(ಜನತಾ ನ್ಯಾಯಾಲಯ) ಕಾರ್ಯಕ್ರಮದಲ್ಲಿ ನ್ಯಾಯವಾದಿ ಅಯ್ಯೂಬ್ ಅಹ್ಮದ್‌ಖಾನ್ ಜನತೆಯ ಪರವಾಗಿ ಕೇಳುತ್ತಿದ್ದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ವಕ್ಫ್ ಬೋರ್ಡ್ ಆಡಳಿತಾವಧಿ ಪೂರ್ಣಗೊಳ್ಳುವ ಮುನ್ನಾ ರಾಜ್ಯ ಸರಕಾರ ಹೊಸ ಆಡಳಿತ ಮಂಡಳಿಯ ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆದರೆ, ಕಳೆದ ಸರಕಾರದ ಅವಧಿಯಲ್ಲಿ ವಕ್ಫ್ ಬೋರ್ಡ್ ಅವಧಿ ಮುಗಿದಿದ್ದರೂ ಚುನಾವಣೆ ಮಾಡದೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಯಿತು ಎಂದು ಅವರು ಹೇಳಿದರು.
ವಕ್ಫ್ ಬೋರ್ಡ್ ವಿರುದ್ಧ ಯಾವುದಾದರೂ ಗಂಭೀರವಾದ ಆರೋಪಗಳಿದ್ದಾಗ ಮಾತ್ರ ಸರಕಾರ ಅದನ್ನು ಸೂಪರ್‌ಸೀಡ್ ಮಾಡಿ ಕೇವಲ ಆರು ತಿಂಗಳ ಅವಧಿಗೆ ಮಾತ್ರ ಆಡಳಿತಾಧಿಕಾರಿ ನೇಮಕ ಮಾಡಬಹುದು. ಆನಂತರ, ಚುನಾವಣೆ ನಡೆಸಿ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಬೇಕು ಎಂದು ರಹ್ಮಾನ್‌ಖಾನ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಮಾನತ್ ಬ್ಯಾಂಕ್‌ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಂ ಸಮುದಾಯದ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಅಮಾನತ್ ಬ್ಯಾಂಕ್ ಆರಂಭಿಸಲಾಯಿತು. ನನ್ನ ಜೀವನದ 25 ವರ್ಷಗಳನ್ನು ಈ ಸಂಸ್ಥೆಯ ಬೆಳವಣಿಗೆಗೆ ನೀಡಿದ್ದೇನೆ. ಆದರೆ, ದುರಾದೃಷ್ಟವಶಾತ್ ನನ್ನನ್ನೆ ಖಳನಾಯಕನ ಸ್ಥಾನದಲ್ಲಿ ನಿಲ್ಲಿಸಲಾಯಿತು ಎಂದು ರಹ್ಮಾನ್‌ಖಾನ್ ಬೇಸರ ವ್ಯಕ್ತಪಡಿಸಿದರು.
ಮೂರು ಲಕ್ಷ ರೂ.ಗಳಿಂದ ಆರಂಭವಾದ ಅಮಾನತ್ ಬ್ಯಾಂಕ್ ಅನ್ನು 500 ಕೋಟಿ ರೂ.ಗಳ ಬಂಡವಾಳದವರೆಗೆ ತಲುಪಿಸಿದ್ದೆ. ದಕ್ಷಿಣ ಭಾರತದಲ್ಲೆ ಮೊದಲ ಬಾರಿಗೆ ಅಮಾನತ್ ಬ್ಯಾಂಕ್‌ಗೆ ಶೆಡ್ಯೂಲ್ಡ್ ಬ್ಯಾಂಕಿನ ಸ್ಥಾನಮಾನ ಲಭ್ಯವಾಯಿತು. ಆದರೆ, ಕೆಲವರ ಚಿತಾವಣೆಯಿಂದ ಈ ಸಂಸ್ಥೆ ಇಂದು ಈ ಸ್ಥಿತಿಗೆ ತಲುಪಿದೆ ಎಂದು ಅವರು ಹೇಳಿದರು.
ಅಮಾನತ್ ಬ್ಯಾಂಕಿನಲ್ಲಿ ನಾನಾಗಲಿ, ನನ್ನ ಕುಟುಂಬದ ಯಾವೊಬ್ಬ ಸದಸ್ಯನಾಗಲಿ ಯಾವ ಬಾಕಿಯನ್ನು ಉಳಿಸಿಕೊಂಡಿಲ್ಲ. ಆರೋಪಗಳು ಮಾಡುವುದು ಸುಲಭ. ಅದಕ್ಕೆ ಯಾವುದಾದರೂ ಆಧಾರವಿದೆಯೇ? ಸರಕಾರ ನಡೆಸಿರುವ ತನಿಖೆಗೆ ಸಂಬಂಧಿಸಿದಂತೆ ಎರಡು ತನಿಖಾ ವರದಿಗಳು ನಮ್ಮ ಮುಂದಿವೆ. ಅದರಲ್ಲಿ ಯಾವುದೂ ನೈಜವಾದದ್ದು ಎಂಬುದನ್ನು ಸರಕಾರವೇ ತಿಳಿಸಲಿ ಎಂದು ರಹ್ಮಾನ್‌ಖಾನ್ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ರೋಷನ್‌ಬೇಗ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಉಬೇದುಲ್ಲಾ ಶರೀಫ್, ವಿಷನ್ ಕರ್ನಾಟಕ ಸಂಘಟನೆಯ ಜಂಟಿ ಸಂಚಾಲಕ ಮುಖ್ತಾರ್ ಅಹ್ಮದ್, ಕಾರ್ಯಕ್ರಮದ ಆಯೋಜಕ ಗುಲಾಮ್-ಎ-ಗೌಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







