ಸಮಾಜಶಾಸ್ತ್ರಜ್ಞ ಡಾ.ಎಚ್.ಎಂ.ಮರುಳಸಿದ್ದಯ್ಯ ನಿಧನ

ಬೆಂಗಳೂರು, ಅ. 27: ಹೆಸರಾಂತ ಸಮಾಜಶಾಸ್ತ್ರಜ್ಞ ಮತ್ತು ಕನ್ನಡಪರ ಚಿಂತಕ ಡಾ.ಎಚ್.ಎಂ.ಮರುಳಸಿದ್ದಯ್ಯ (87) ಅವರು ಶನಿವಾರ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದು, ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.
ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಇತ್ತೀಚೆಗೆ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದಲ್ಲದೆ, ನ್ಯುಮೋನಿಯಾದಿಂದಲೂ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
1931ರ ಜುಲೈ 29ರಂದು ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆಯಲ್ಲಿ ಜನಿಸಿದ ಮರುಳಸಿದ್ದಯ್ಯ, ನಂತರ ಮದರಾಸು ವಿವಿ, ಧಾರವಾಡದ ಕರ್ನಾಟಕ ವಿವಿ ಮತ್ತು ಬೆಂಗಳೂರು ವಿ.ವಿ.ಗಳಲ್ಲಿ ದಶಕಗಳ ಕಾಲ ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯ ಶಾಸ್ತ್ರಗಳನ್ನು ಬೋಧಿಸಿದ್ದರು.
ಇವೆರಡೂ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮರುಳಸಿದ್ದಯ್ಯನವರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ದೇಶದ ಅಗ್ರಗಣ್ಯ ಸಮಾಜಶಾಸ್ತ್ರಜ್ಞರಲ್ಲಿ ಒಬ್ಬರೆನಿಸಿಕೊಂಡಿದ್ದರು. ಸಮಾಜಕಾರ್ಯ ವಿಶ್ವಕೋಶದ ಸಂಪಾದನೆ, ಕೆದರಿದ ಕೆಂಡ ಕಾದಂಬರಿ, ಓಲ್ಡ್ ಪೀಪಲ್ ಆಫ್ ಮಾಗುಂಟೆ ಮುಂತಾದವು ಇವರ ಗಮನಾರ್ಹ ಕೃತಿಗಳಲ್ಲಿ ಸೇರಿವೆ. ಇದರ ಜತೆಗೆ, ಸಮಾಜಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಆಚಾರ್ಯ ಕೃತಿಗಳನ್ನು ಮರುಳಸಿದ್ದಯ್ಯ ಕನ್ನಡಕ್ಕೆ ಅನುವಾದಿಸಿದ್ದರು.
ಕನ್ನಡಪರ ಕೆಲಸಗಳಲ್ಲೂ ಸಕ್ರಿಯರಾಗಿದ್ದ ಇವರು ಸಾಹಿತಿಗಳ ಮತ್ತು ಕಲಾವಿದರ ಬಳಗದ ಪ್ರಧಾನ ಸಂಚಾಲಕರಾಗಿದ್ದರು. ಅಲ್ಲದೆ ಕನ್ನಡ ಶಕ್ತಿ ಕೇಂದ್ರ, ಶರಣ ಸಾಹಿತ್ಯ ಪರಿಷತ್, ಕನ್ನಡ ಗೆಳೆಯರ ಬಳಗ ಮುಂತಾದ ಸಂಘಟನೆಗಳಲ್ಲಿ ಅವರು ಉನ್ನತ ಮಟ್ಟದ ಪದಾಧಿಕಾರಿಯಾಗಿ ದುಡಿದಿದ್ದರು.
ಬೆಂಗಳೂರಿನ ಹೊರವಲಯದಲ್ಲಿ ಬುಡಬುಡಿಕೆ ಜನಾಂಗದವರ ಪುನರ್ವಸತಿಗಾಗಿ ಹೋರಾಡಿ, ಅದರಲ್ಲಿ ಗೆದ್ದಿದ್ದು ಮರುಳಸಿದ್ದಯ್ಯನವರ ಹೆಗ್ಗಳಿಕೆಯಾಗಿದೆ. ಅಲ್ಲದೆ, ತಮ್ಮ ಹುಟ್ಟೂರಿನ ಮಕ್ಕಳ ಶಿಕ್ಷಣಕ್ಕೆ ಅವರು ಅಪಾರ ಪ್ರಮಾಣದ ದೇಣಿಗೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು
ಮರುಳಸಿದ್ದಯ್ಯನವರ ಅಂತ್ಯಕ್ರಿಯೆಯು ನಾಳೆ (ಅ.28) ಬೆಳಗ್ಗೆ 10ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ವರ್ಗ ತಿಳಿಸಿದೆ.







