ಗಲ್ಫ್ ಮೆಡಿಕಲ್ ಯುನಿವರ್ಸಿಟಿ: 12ನೇ ವಾರ್ಷಿಕ ವೈದ್ಯಕೀಯ, ವಿಜ್ಞಾನ ಪ್ರದರ್ಶನ
5 ಸಾವಿರ ವಿದ್ಯಾರ್ಥಿಗಳಿಂದ ವೀಕ್ಷಣೆ

ದುಬೈ, ಅ. 27: ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ ಆಯೋಜಿಸಿದ 12ನೇ ವಾರ್ಷಿಕ ವೈದ್ಯಕೀಯ ಮತ್ತು ವಿಜ್ಞಾನ ಪ್ರದರ್ಶನ (ಎಂಎಎಸ್‌ಇ)ದಲ್ಲಿ ಯುಎಇಯಾದ್ಯಂತದ ಶಾಲೆಗಳ ಯುವ ವಿದ್ಯಾರ್ಥಿಗಳು ರೂಪಿಸಿರುವ 900 ಯೋಜನೆಗಳು, ಪೋಸ್ಟರ್‌ಗಳು ಮತ್ತು ಚಿತ್ರಕಲೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ಈ ಪ್ರದರ್ಶನದಲ್ಲಿ ಒಟ್ಟಾರೆ 25,000 ದಿರ್ಹಮ್ (4,97,000 ರೂ.) ಗೆಲ್ಲುವ ಅವಕಾಶವಿತ್ತು. ಲಾಕ್ ಮಾಡಲ್ಪಟ್ಟ ಕಾರಿನ ಒಳಗೆ ಮಕ್ಕಳು ಸಿಕ್ಕಿಹಾಕಿಕೊಳ್ಳದಂತೆ ತಡೆಯುವ ಸಾಧನ, ಬಾಗಿಲಿನಿಂದ ವಿದ್ಯುತ್ ತಯಾರಿಸುವ ವಿಧಾನ, ಸವಾರರಿಗೆ ತಮ್ಮ ಸುತ್ತಮುತ್ತಲ 360 ಕೋನದ ಪರಿಸರ ವನ್ನು ತೋರಿಸುವ ಸ್ಮಾರ್ಟ್ ಹೆಲ್ಮೆಟ್ ಮತ್ತು ಮಕ್ಕಳು ಬಾಲ್ಕನಿಯಿಂದ ಬೀಳದಂತೆ ತಡೆಯುವ ವ್ಯವಸ್ಥೆ ಇತ್ಯಾದಿಗಳು ಜಿಎಂಯು ಎಂಎಎಸ್‌ಇಯಲ್ಲಿ ಕಂಡುಬಂದ ಕೆಲವು ವಿಶಿಷ್ಟ ಯೋಜನೆಗಳು.
ಅ. 24 ಮತ್ತು 25ರಂದು ನಡೆದ ಈ ಪ್ರದರ್ಶನದಲ್ಲಿ 65 ಶಾಲೆಗಳ 2 ಸಾವಿರ ವಿದ್ಯಾರ್ಥಿಗಳು ಯೋಜನೆಗಳು, ಪೋಸ್ಟರ್‌ಗಳು ಮತ್ತು ಚಿತ್ರಕಲೆ ವಿಭಾಗದಲ್ಲಿ ಬಹುಮಾನವನ್ನು ಗೆಲ್ಲಲು ಭಾಗವಹಿಸಿದ್ದರು. ಅ. 24ರಂದು ಜಿಎಂಯುನ ಶೈಕ್ಷಣಿಕ ವಿಭಾಗದ ಉಪಾಧ್ಯಕ್ಷ ಮಂದ ವೆಂಕಟರಮಣ ಅವರು ಕಾಲೇಜಿನ ಡೀನ್ ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು.
ದೇಶಾದ್ಯಂತದ ಶಾಲೆಗಳ 10,11 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಔಷಧ ಆಧಾರಿತ 300 ಯೋಜನೆಗಳು, 300 ಪೋಸ್ಟರ್‌ಗಳು ಮತ್ತು ಸುಮಾರು 250 ಚಿತ್ರಕಲೆಗಳನ್ನು ಈ ವೇಳೆ ಪ್ರದರ್ಶಿಸಿದರು. ಪದಕಗಳು ಮತ್ತು ಪ್ರಮಾಣಪತ್ರಗಳ ಜೊತೆಗೆ 25,000 ದಿರ್ಹಮ್ ನಗದು ಬಹುಮಾನವನ್ನು ಈ ಹೊಂದಿದ್ದ ಈ ಸ್ಪರ್ಧೆಯ ತೀರ್ಪುಗಾರರ ಸಮಿತಿಯಲ್ಲಿ ಪ್ರಖ್ಯಾತ ವೈದ್ಯರು, ಉಪನ್ಯಾಸಕರು ಮತ್ತು ವೈದ್ಯಕೀಯ ವಿಜ್ಞಾನ ವೃತ್ತಿಪರರು ಉಪಸ್ಥಿತರಿದ್ದರು.
ಕ್ರಿಯಾತ್ಮಕ ಮಾದರಿಗಳ ಜೊತೆಗೆ ವಿದ್ಯಾರ್ಥಿಗಳು ವಿವಿಧ ವೈದ್ಯಕೀಯ ಮತ್ತು ವೈಜ್ಞಾನಿಕ ಸಂಶೋಧನೆಗಳು, ರೋಗ ಮತ್ತು ಜೀವನಶೈಲಿ ಸಮಸ್ಯೆಗಳು ಇತ್ಯಾದಿಗಳ ಸ್ಥಿರ ಮಾದರಿಗಳನ್ನೂ ಪ್ರದರ್ಶಿಸಿದರು. ಚಿತ್ರಕಲೆಗಳೂ ವೀಕ್ಷಕರಿಂದ ಮೆಚ್ಚುಗೆಯನ್ನು ಗಳಿಸಿದವು. ಪ್ರದರ್ಶನದ ವಿಜೇತರನ್ನು ಅ. 25ರಂದು ಘೋಷಿಸಲಾಯಿತು ಮತ್ತು ಅಂದೇ ಬಹುಮಾನಗಳನ್ನು ವಿತರಿಸಲಾಯಿತು. ಒಟ್ಟಾರೆ ಚಾಂಪಿಯನ್‌ಶಿಪ್ ಜೊತೆಗೆ, ವೀಕ್ಷಕರ ಆಯ್ಕೆ ಪ್ರಶಸ್ತಿಗಗಳು ಮತ್ತು ತಂಡ ಹಾಗೂ ವೈಯಕ್ತಿಕವಾಗಿ 35 ವಿಭಾಗಗಳಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.







