ಶೇಡ್ಸ್ ಆಫ್ ಸಾಹೋ ಬಿಡುಗಡೆ
ಬಾಹುಬಲಿ ಸ್ಟಾರ್ ಪ್ರಭಾಸ್ ಅವರ 39ನೇ ಜನ್ಮ ದಿನಾಚರಣೆ ಸಂಭ್ರಮದ ಸಂದರ್ಭ ಅವರ ಮುಂದಿನ ದ್ವಿಭಾಷಾ ಚಿತ್ರ ‘ಸಾಹೂ’ ನಿರ್ದೇಶಕರು ಚಿತ್ರದ ದೃಶ್ಯಗಳ ಹಿಂದಿನ ವೀಡಿಯೊ ಬಿಡುಗಡೆಗೊಳಿಸಿದ್ದಾರೆ. ಈ ವೀಡಿಯೋವನ್ನು ‘ಶೇಡ್ಸ್ ಆಫ್ ಸಾಹೋ’ ಎಂದು ಕರೆಯಲಾಗಿದೆ. ಅಬುಧಾಬಿಯಲ್ಲಿ ಚಿತ್ರೀಕರಿಸಲಾದ ಚಿತ್ರದ ಸಾಹಸ ದೃಶ್ಯಗಳನ್ನು ಈ ವೀಡಿಯೊ ಒಳಗೊಂಡಿದೆ. ಈ ವೀಡಿಯೊ ವನ್ನು ‘ಸಾಹೋ’ ಚಿತ್ರಕ್ಕೆ ಸಾಹಸ ನಿರ್ದೇಶನ ನೀಡಿದ ಹಾಲಿವುಡ್ನ ಖ್ಯಾತ್ ಸಾಹಸ ನಿರ್ದೇಶಕ ಕೆನ್ನಿ ಬೇಟ್ಸ್ ಬಿಡುಗಡೆ ಗೊಳಿಸಿದರು. ಕೆನ್ನಿ ಬೇಟ್ಸ್ ಅವರು ‘ಪರ್ಲ್ ಹಾರ್ಬರ್’ ಹಾಗೂ ‘ಟ್ರಾನ್ಸ್ಫಾರ್ಮರ್’ ಚಿತ್ರದ ಸಾಹಸ ನಿರ್ದೇಶನಕ್ಕೆ ಖ್ಯಾತರಾದವರು.
ರಜನಿಕಾಂತ್ ಅವರ 2.0 ಚಿತ್ರಕ್ಕೂ ಅವರು ಸಾಹಸ ನಿರ್ದೇಶನ ನೀಡಿದ್ದಾರೆ. ಅಬುಧಾಬಿಯಲ್ಲಿ 60 ದಿನಗಳ ತಯಾರಿಯ ಬಳಿಕ ಶೂಟಿಂಗ್ ನಡೆಸಲಾಯಿತು. ಈ ಚಿತ್ರೀಕರಣದಲ್ಲಿ 400 ಸದಸ್ಯರು 30 ದಿನಗಳ ಕಾಲ ಪಾಲ್ಗೊಂಡಿದ್ದರು ಎಂಬುದನ್ನು ಈ ವೀಡಿಯೊ ಬಹಿರಂಗಪಡಿಸಿದೆ. ‘ಸಾಹೋ’ ತೆಲುಗು-ಹಿಂದಿ ಭಾಷೆ ಚಿತ್ರ. ಪ್ರಭಾಸ್, ಶ್ರದ್ಧಾ ಕಪೂರ್, ನೀಲ್ ನಿತಿನ್ ಮುಖೇಶ್, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುಜೀತ್ ನಿರ್ದೇಶನದ ಈ ಚಿತ್ರಕ್ಕೆ ಶಂಕರ್- ಎಹ್ಸಾನ್-ಲೋಯ್ ಸಂಗೀತ ನೀಡಿದ್ದಾರೆ. ಇದು ಭಾರತದ ಅತಿ ದೊಡ್ಡ ಬಜೆಟ್ನ ಚಿತ್ರ ಎಂದು ಹೇಳಲಾಗುತ್ತಿದೆ.