ಲೈಂಗಿಕ ದೌರ್ಜನ್ಯ ಯತ್ನದ ಆರೋಪ: ಪ್ರತಿರೋಧ ಒಡ್ಡಿದ ಬಾಲಕನಿಗೆ ಹಲ್ಲೆ

ಬಂಟ್ವಾಳ, ಅ. 28: ಬಾಲಕನಿಗೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಪ್ರತಿರೋಧ ಒಡ್ಡಿದಾಗ ಆತನಿಗೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಕಡೇಶ್ವಾಲ್ಯ ಸಮೀಪ ಕಲ್ಲಾಜೆ ಎಂಬಲ್ಲಿ ಶನಿವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಡೇಶ್ವಾಲ್ಯ ಸಮೀಪ ಕಲ್ಲಾಜೆಯ ಇಬ್ರಾಹೀಂ ಎಂಬವರ ಪುತ್ರ ಹಲ್ಲೆಗೊಳಗಾದ 11 ವರ್ಷದ ಬಾಲಕ ಎಂದು ತಿಳಿದುಬಂದಿದೆ. ಗಾಯಾಳು ಬಾಲಕನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಘಟನೆ ವಿವರ
ಶನಿವಾರ ಸಂಜೆ ಕಡೇಶ್ವಾಲ್ಯದ ಕಲ್ಲಾಜೆಯ ಅಂಗಡಿಗೆ ತೆರಳಿದ ಸಂದರ್ಭ ಬಾಲಕನಿಗೆ ಪರಿಚಿತರಾದ ರಾಜೇಶ್, ಉಮೇಶ್ ಮತ್ತಿತರರಿದ್ದ ಗುಂಪೊಂದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು, ಇದಕ್ಕೆ ಪ್ರತಿರೋಧ ಒಡ್ಡಿದಾಗ ಬಾಲಕನ ಕಿವಿ ಹಿಡಿದು ಕೈ, ಕಾಲು, ತಲೆ ಹಾಗೂ ಕೆನ್ನೆಗೆ ಹೊಡೆದಿದ್ದಾರೆ ಎಂದು ದೂರಲಾಗಿದೆ.
ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ರವಿವಾರ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಬಾಲಕನ ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
''ಸಿಎಫ್‌ಐ ನಿಯೋಗವು ಆಸ್ಪತ್ರೆಗೆ ತೆರಳಿ ಬಾಲಕನನ್ನು ವಿಚಾರಿಸಿದೆ ಹಾಗೂ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲು ಒತ್ತಾಯಿಸಿದೆ''.
-ನಬೀಲ್, ಸಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ
ಘಟನೆಯಿಂದ ತನ್ನ ಪುತ್ರನ ನಡವಳಿಕೆಯಲ್ಲಿ ಬದಲಾವಣೆ ಕಂಡಿದ್ದು, ದೈಹಿಕ ಹಾಗೂ ಮಾನಸಿಕವಾಗಿ ನೊಂದಿದ್ದಾನೆ. ಅಲ್ಲದೆ, ಮಾತನಾಡಲು ಹೆದರುತ್ತಿದ್ದಾನೆ.
- ಬಾಲಕನ ತಾಯಿ







